ಗದಗ: ವಿಕೇಂದ್ರೀಕರಣ ಬಲಪಡಿಸಿ ಪಂಚಾಯತ್ ಆಡಳಿತ ಪರಿಣಾಮಕಾರಿ ಮಾಡಬೇಕೆಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಸಣ್ಣ ವಿಷಯಗಳಿಗೂ ಜನರು ಎಚ್ಚರಿಕೆಯಿಂದಿರಬೇಕು. ಪಂಚಾಯಿತಿ ಚುನಾವಣೆಯಂತಹ ಮಹತ್ವದ ವಿಷಯದಲ್ಲಿ ಮೌನವಾಗಿರುವುದು ಸರಿಯಲ್ಲ. ಸರ್ಕಾರ ಚುನಾವಣೆ ನಡೆಸದೆ ನಿಮ್ಮ ಅಧಿಕಾರ ಕಡಿತ ಮಾಡಿದರೂ ಮೌನವಾಗಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟರು.ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಪೂರಕ ವಾತಾವರಣ ಇದೆ. ಗ್ರಾಮ ಸಭೆಯೇ ಅಭಿವೃದ್ಧಿಯ ಕೇಂದ್ರವಾಗಿದ್ದು, ಊರಿನ ಕಾಮಗಾರಿಗಳ ಕುರಿತು ಅಂತಿಮ ನಿರ್ಧಾರಗಳನ್ನು ಗ್ರಾಮಸಭೆಯಲ್ಲೇ ಕೈಗೊಳ್ಳಬೇಕು. ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿ ಗದಗ ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು. ಪಂಚಾಯತ್ ರಾಜ್ ವ್ಯವಸ್ಥೆ ರಾಜಕೀಯ ನಾಯಕತ್ವ ಬೆಳೆಸುವ ಪಾಠಶಾಲೆಯಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜನರಿಗೆ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಂಬಲ ಜನಪ್ರತಿನಿಧಿಗಳಲ್ಲಿ ಇರಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮ ಮಟ್ಟದಲ್ಲೇ ಪಂಚಾಯಿತಿ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪದ್ಧತಿ ಇತ್ತು. ಇಂದಿನ ದಿನಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಿ ರೂಪುಗೊಂಡಿದ್ದು, ರಾಜ್ಯದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಸಮರ್ಥವಾಗಿ ಜಾರಿಗೊಂಡಿದೆ ಎಂದರು.ಗ್ರಾಪಂ ಸದಸ್ಯರು ತಮ್ಮ ವಾರ್ಡನ್ನು ಮಾದರಿ ವಾರ್ಡನ್ನಾಗಿಸಲು ಸಂಕಲ್ಪ ಬದ್ಧರಾಗಿಬೇಕು. ವಿಕೇಂದ್ರೀಕರಣವಿಲ್ಲದೆ ಗ್ರಾಮ ಆಡಳಿತ ಅಸಾಧ್ಯ ಎಂಬ ಹಂತಕ್ಕೆ ಸಮಾಜ ತಲುಪಿದೆ. 1923ರ ಪಂಚಾಯತ್ ರಾಜ್ ತಿದ್ದುಪಡಿಯಿಂದ ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಬಲ ಸಿಕ್ಕಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಾಭಿವೃದ್ಧಿ ಸಾಧಿಸಬೇಕು ಎಂದರು.ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಮಾತನಾಡಿ, ಪಂಚಾಯತ್ ರಾಜ್ ಆಶಯಗಳನ್ನು ಜಾರಿಗೊಳಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಂಚಾಯಿತಿ ಎಂದರೆ ಐದು ಜನರ ಆಡಳಿತ ವ್ಯವಸ್ಥೆಯಾಗಿದ್ದು, ಇದು ವೇದಗಳ ಕಾಲದಿಂದಲೇ ಪ್ರಚಲಿತದಲ್ಲಿದೆ. ಗಂಗರು, ಮೌರ್ಯರು ಹಾಗೂ ಚೋಳರ ಆಡಳಿತ ಕಾಲದಲ್ಲಿಯೂ ಸ್ಥಳೀಯ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿತ್ತು ಎಂಬುದನ್ನು ಇತಿಹಾಸ ಸ್ಪಷ್ಟಪಡಿಸುತ್ತದೆ ಎಂದರು.ಈ ವೇಳೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಪಂ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರೊ. ಜೆ.ಕೆ. ಜಮಾದಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಸಿ.ಆರ್. ಮುಂಡರಗಿ, ಎಂ.ವೈ. ಪಾಟೀಲ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಜಿಪಂ, ತಾಪಂ ಅಧಿಕಾರಿಗಳು ಇದ್ದರು.