ಡಾ. ರಾಜಕುಮಾರ ಕನ್ನಡ ಚಿತ್ರರಂಗದ ಶಕ್ತಿ: ಡಿಸಿ ಸಿ.ಎನ್. ಶ್ರೀಧರ್

KannadaprabhaNewsNetwork |  
Published : Apr 25, 2026, 02:00 AM IST
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಮಾತನಾಡಿದರು. | Kannada Prabha

ಸಾರಾಂಶ

ಡಾ. ರಾಜಕುಮಾರ್ ಅವರು ಕೇವಲ ನಟರಲ್ಲ, ಸರಳತೆ, ಶಿಸ್ತಿನ ಜೀವನ ಮತ್ತು ಮಾನವೀಯತೆಗಾಗಿ ಹೆಸರಾಗಿದ್ದ ಮಹಾನ್ ವ್ಯಕ್ತಿ. ಅವರ ನಡೆ- ನುಡಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಯುವಕರು ಅವರ ಜೀವನದಿಂದ ಪಾಠಗಳನ್ನು ಕಲಿಯಬೇಕು.

ಗದಗ: ಕನ್ನಡ ಚಲನ ಚಿತ್ರರಂಗದ ಅಪ್ರತಿಮ ನಟ ಡಾ. ರಾಜಕುಮಾರ ಅವರ ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಮಾಜದ ಮೇಲಿನ ಬದ್ಧತೆ ಯುವಪೀಳಿಗೆಗೆ ದಿಕ್ಕು ತೋರಿಸುತ್ತವೆ. ಡಾ. ರಾಜಕುಮಾರ ಅವರು ಒಬ್ಬ ವ್ಯಕ್ತಿ ಅಲ್ಲ, ಕನ್ನಡ ಚಿತ್ರರಂಗದ ಶಕ್ತಿ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಡಾ. ರಾಜಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಡಾ. ರಾಜಕುಮಾರ್ ಅವರು ಕೇವಲ ನಟರಲ್ಲ, ಸರಳತೆ, ಶಿಸ್ತಿನ ಜೀವನ ಮತ್ತು ಮಾನವೀಯತೆಗಾಗಿ ಹೆಸರಾಗಿದ್ದ ಮಹಾನ್ ವ್ಯಕ್ತಿ. ಅವರ ನಡೆ- ನುಡಿಗಳು ಸಮಾಜಕ್ಕೆ ಮಾದರಿಯಾಗಿದ್ದು, ಯುವಕರು ಅವರ ಜೀವನದಿಂದ ಪಾಠಗಳನ್ನು ಕಲಿಯಬೇಕು ಎಂದರು.ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟದ ಗೌರವಧ್ಯಕ್ಷ ಬಸವರಾಜ ಮನಗುಂಡಿ ಮಾತನಾಡಿ, ಡಾ. ರಾಜಕುಮಾರ ಅವರು 1929ರ ಏ. 24ರಂದು ಗಾಜನೂರಿನಲ್ಲಿ ಜನಿಸಿದರು. ಇವರ ಮೊದಲ ಹೆಸರು ಮುತ್ತುರಾಜ ಆಗಿತ್ತು. ಚಿತ್ರರಂಗಕ್ಕೆ ಪದಾರ್ಪಣೆಗೊಂಡ ನಂತರ ಡಾ. ರಾಜಕುಮಾರ ಎಂಬ ಹೆಸರಿನಿಂದ ಕನ್ನಡ ಚಿತ್ರ ರಂಗಕ್ಕೆ ಪರಿಚಿತರಾದರು. ಅವರ ಬಂಗಾರದ ಮನುಷ್ಯ ಚಲನಚಿತ್ರ ಕೇವಲ ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಆದರ್ಶಗಳನ್ನು ಪಾಲಿಸಿದ ಮಹಾನ್ ಚೇತನ ಎಂದರು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಗುಬ್ಬಿ ವೀರಣ್ಣನವರ ರಂಗಭೂಮಿ ನಾಟಕ ಕಂಪನಿಯನ್ನು ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲನಟನಾಗಿ ಅಭಿನಯ ಪಯಣ ಆರಂಭಿಸಿದ ಇವರು 1954ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದರು.

ಡಾ. ರಾಜ್ ಕುಮಾರ್ ಅವರು ತಮ್ಮ ಐದು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅವರ ಪ್ರಮುಖ ಚಿತ್ರಗಳಲ್ಲಿ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ ಬಂಗಾರದ ಮನುಷ್ಯ ಚಿತ್ರವು 1972ರಲ್ಲಿ ಬಿಡುಗಡೆಯಾಗಿ ಸಾವಿರಾರು ಯುವಕರು ಕೃಷಿಯತ್ತ ಮುಖ ಮಾಡಲು ಪ್ರೇರಣೆಯಾಯಿತು ಎಂದರು.

ಕಲಾವಿದ ಗೌಡಪ್ಪ ಬೊಮ್ಮಪ್ಪನವರ ಹಾಗೂ ಕಲಾ ತಂಡದವರಿಂದ ಡಾ. ರಾಜಕುಮಾರ ಚಿತ್ರಗೀತೆಗಳ ಗಾಯನ ಪ್ರಸ್ತುತ ಪಡಿಸಿದರು. ವೀರಣ್ಣ ಅಂಗಡಿ ಮತ್ತು ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ ಹಾಗೂ ಅಭಿಮಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಡಿಡಿಪಿಐ ಆರ್.ಎಸ್. ಬುರಡಿ, ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಧ್ಯಕ್ಷ ವಿಜಯ ಕಲ್ಮನಿ, ಜಿಲ್ಲಾಧ್ಯಕ್ಷ ವಿಠಲ್ ಪರಾಪುರ, ಉಪಾಧ್ಯಕ್ಷ ನಾಗರಾಜ ಗುತ್ತಿ, ಮಲ್ಲಿಕಾರ್ಜುನ ಸಂಗಾಪುರ, ವಿನಾಯಕ ಕಜಕೋಶಿ, ಮಲ್ಲೇಶ ಪರಾಪುರ, ರಾಮು ಬಳ್ಳಾರಿ, ಮೇಘನಾ ಕೊಟ್ಟೂರು, ಭಾಷಸಾಬ್ ಹುಲಕೋಟಿ, ಪರಶುರಾಮ ರಾಮಗಿರಿ, ರಾಘವೇಂದ್ರ ಪರಾಪುರ, ಗಣೇಶ ಹುಬ್ಬಳ್ಳಿ ಸೇರಿದಂತೆ ಪ್ರಮುಖರು ಇದ್ದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!