ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕ ಹಾಗೂ ಮಹಾಸಭಾದ ಯುವ ಘಟಕದ ವತಿಯಿಂದ ತಾಲೂಕಿನ ಗೌಡಳ್ಳಿ ಬಿ.ಜಿ.ಎಸ್. ವಿದ್ಯಾಸಂಸ್ಥೆಯ ಆವರಣದಲ್ಲಿ ಬಸವಣ್ಣನವರ ಜಯಂತಿ, ಹಾನಗಲ್ ಕುಮಾರಸ್ವಾಮಿ ಜಯಂತಿ, ಡಾ. ಶಿವಕುಮಾರ ಸ್ವಾಮೀಜಿ ಹಾಗೂ ರೇಣುಕಾಚಾರ್ಯ ಜಯಂತಿ ಅಂಗವಾಗಿ ಧಾರ್ಮಿಕ ಸಭೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಈಚೆಗೆ ನಡೆಯಿತು. ಸಭಾ ಕಾರ್ಯಕ್ರಮವನ್ನು ಶಾಸಕರ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಬಸವಣ್ಣನ ಅನುಯಾಯಿಗಳಾದ ನಾವು ಸಮಾಜ ಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಇತರರಿಗೆ ಮಾದರಿಯಾಗಿ ಬದುಕಬೇಕು. ಕಲುಷಿತಗೊಳ್ಳುತ್ತಿರುವ ಸಾಮಾಜಿಕ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಪ್ರತಿಯೊಬ್ಬರೂ ಬಸವಾದಿ ಶರಣರ ಜೀವನ ಮತ್ತು ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಇಂದು ನಮ್ಮ ನಾಡಿನಲ್ಲಿ ಮಠ- ಮಾನ್ಯಗಳು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ನೀಡುತ್ತಿರುವ ಸೇವಾ ಕಾರ್ಯಗಳು ಅನನ್ಯವಾದದ್ದು. ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಬಸವ ಭವನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರು. ಅನುದಾನ ನೀಡುವ ಭರವಸೆ ನೀಡಿದರು.ಧಾರ್ಮಿಕ ಸಭೆಯಲ್ಲಿ ಧರ್ಮ ಮತ್ತು ಸಮಾಜದ ಕುರಿತು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸಮಾನತೆ ಸಾರಿದ ಶರಣರ ಚಿಂತನೆಗಳಿಗೆ ಸಮನಾದ ಶಕ್ತಿ ಇಲ್ಲ. ಎಲ್ಲ ಕಾಲಕ್ಕೂ ಶರಣರ ಚಿಂತನೆಗಳು ಅನ್ವಯವಾಗುವುದು ಶರಣ ತತ್ವಗಳ ಚಿಂತನೆಯ ವಿಶೇಷತೆಯಾಗಿದೆ. ನುಡಿದಂತೆ ನಡೆ- ನಡೆದಂತೆ ನುಡಿ ಎಂದು ತಿಳಿಸುವ ಶರಣರ ವಚನಗಳು, ಕಾಯಕ, ದಾಸೋಹ ಮತ್ತು ಪ್ರಸಾದ ಸಂಸ್ಕೃತಿಯನ್ನು ಸಾರುತ್ತಿವೆ. ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗಿವೆ ಎಂದರು. ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ಪ್ರಸ್ತುತ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ವೀರಶೈವ ಸಮಾಜವು ಇವುಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಯುವಕರು ಪಡೆದುಕೊಳ್ಳಲು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ವಹಿಸಿದ್ದರು. ವೇದಿಕೆಯಲ್ಲಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ, ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಮಹಾಸಭಾದ ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್, ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಪಿ.ಆದರ್ಶ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಧುಸೂದನ್ ಇದ್ದರು. ಇದೇ ಸಂದರ್ಭ ಸಾಹಿತಿ ಪ್ರಭಾಕರ್ ಶಿಶಿಲ ಅವರು ದೊಡ್ಡರಾಜೇಂದ್ರ ಅವರ ಕುರಿತು ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿದರು.