5, 6ರಂದು ಬಸವ ಜಯಂತ್ಯುತ್ಸವ

KannadaprabhaNewsNetwork | Published : Jun 4, 2024 12:31 AM

ಸಾರಾಂಶ

ಮಳೆಯ ಕಾರಣ ಮುಂದೂಡಲಾಗಿದ್ದ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠ, ಮಠದ ಭಕ್ತ ವೃಂದದ ವತಿಯಿಂದ ಗ್ರಾಮಾಂತರ ಬಸವ ಜಯಂತ್ಯುತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಜೂ.೫ ಹಾಗೂ ಜೂ.೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ತಿಳಿಸಿದರು.

ಪೂಜ್ಯದ್ವಯರ ಸಂಸ್ಮರಣೋತ್ಸವ, ಭವ್ಯ ಮೆರವಣಿಗೆಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಳೆಯ ಕಾರಣ ಮುಂದೂಡಲಾಗಿದ್ದ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠ, ಮಠದ ಭಕ್ತ ವೃಂದದ ವತಿಯಿಂದ ಗ್ರಾಮಾಂತರ ಬಸವ ಜಯಂತ್ಯುತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಜೂ.೫ ಹಾಗೂ ಜೂ.೬ ರಂದು ಹಮ್ಮಿಕೊಳ್ಳಲಾಗಿದೆ ಎಂದು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.೫ ರಂದು ಬೆಳಗ್ಗೆ ೭ರಿಂದ ಮಠದ ಆವರಣದಲ್ಲಿ ಗ್ರಾಮಾಂತರ ಭಜನೆ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ ೨ಕ್ಕೆ ಗಾಯಕ ತೊರವಳ್ಳಿ ಟಿ.ಸಿ.ಸೋಮಣ್ಣ ತಂಡದವರಿಂದ ಭಕ್ತಿಗೀತೆ ಗಾಯನ ನಡೆಯಲಿದೆ. ರಾತ್ರಿ ೯ಗಂಟೆಗೆ ಸಿದ್ದಮಲ್ಲೇಶ್ವರ ಕಲಾಸಂಘದಿಂದ ಪ್ರಭುಲಿಂಗಲೀಲೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.ಜೂ.೬ ರಂದು ಬೆಳಗ್ಗೆ ೫ಕ್ಕೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ, ಬೆ.೬ಕ್ಕೆ ಮಲ್ಲನಮೂಲೆ ಮಠದ ಚನ್ನಬಸವ ಸ್ವಾಮೀಜಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ ೭ಗಂಟೆಗೆ ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ ಇಷ್ಟ ಲಿಂಗಪೂಜೆ ನೆರವೇರಿಸುವರು. ಮಲ್ಲಿಕಾರ್ಜುನ ಬೆಟ್ಟ ಮುಕುಂದೂರು ವಿರಕ್ತಮಠದ ಮಹಾಂತ ಬಸವಲಿಂಗಸ್ವಾಮಿ ಬೆಳಗ್ಗೆ ೧೧ಕ್ಕೆ ಪ್ರವಚನ ನಡೆಸಿಕೊಡುವರು ಎಂದರು.ಕಾರ್ಯಕ್ರಮದ ಪ್ರಮುಖ ಘಟ್ಟವಾದ ಭವ್ಯ ಮರವಣಿಗೆ ಮತ್ತು ಗ್ರಾಮಾಂತರ ಬಸವ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಬೆಳಗ್ಗೆ ೧೦ ಗಂಟೆಗೆ ದೇವನೂರು ಗುರುಮಲ್ಲೇಶ್ವರ ದಾಸೋಹ ಮಹಾ ಸಂಸ್ಥಾನಮಠದ ಮಹಂತಸ್ವಾಮೀಜಿ ಚಾಲನೆ ನೀಡುವರು. ಮೆರವಣಿಗೆಯು ಮಠದ ಆವರಣದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು, ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಭಜನಾ ತಂಡಗಳು, ನಂದಿಧ್ವಜ, ವೀರಗಾಸೆ, ಅಲಂಕೃತ ಬಸವಣ್ಣನ ಭಾವಚಿತ್ರಗಳು, ಜೋಡಿ ಎತ್ತುಗಳು ಭಾಗವಹಿಸಲಿವೆ, ಜಿಲ್ಲೆಯ ನಾನಾ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು. ಎರಡು ದಿನಗಳ ಕಾಲ ನಿರಂತರ ದಾಸೋಹ ನಡೆಯಲಿದ್ದು, ಸುಮಾರು ೪೦ರಿಂದ ೫೦ ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯ ಶ್ರೀ ಮಠದ ಭಕ್ತಾದಿಗಳು ಬಸವ ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶ್ರೀಗಳು ಮನವಿ ಮಾಡಿದರು.

Share this article