ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನಲ್ಲಿ ಒಟ್ಟು 446 ಮತದಾರರಿದ್ದು, 416 (93.04) ಮತಗಳು ಚಲಾವಣೆಗೊಂಡವು. ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದಲೇ ಶಿಕ್ಷಕರು ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಮತಕೇಂದ್ರದ ನೂರು ಮೀಟರ್ ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಪೆಂಡಾಲ್ ಹಾಕಿಕೊಂಡು ಮತಗಟ್ಟೆಗೆ ಆಗಮಿಸುವ ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪರವಾಗಿ ಮತಚಲಾಯಿಸುವಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಎರಡು ಪಕ್ಷಗಳ ಅಭ್ಯರ್ಥಿಗಳು ಅಕ್ಕಪಕ್ಕದಲ್ಲಿಯೇ ಇದ್ದರೂ ಯಾವುದೇ ಗಲಾಟೆ ಗದ್ದಲುಗಳು ಉಂಟಾಗದಂತೆ ಶಾಂತಿಯುತವಾಗಿ ಪ್ರಚಾರ ನಡೆಸಿದರು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿವೇಕನಂದ ಪರ ಜೆಡಿಎಸ್-ಬಿಜೆಪಿ ಪಕ್ಷದ ಕಾರ್‍ಯಕರ್ತರು ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು.ಕಾಂಗ್ರೆಸ್ ಅಭ್ಯರ್ಥಿ ಮರೀತಿಬ್ಬೇಗೌಡ ಅವರ ಪರವಾಗಿ ಕಾಂಗ್ರೆಸ್-ರೈತಸಂಘದ ಕಾರ್‍ಯಕರ್ತರು ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಅವರ ನೇತೃತ್ವದಲ್ಲಿ ತಮ್ಮ ಅಭ್ಯರ್ಥಿಗೆ ಮತಹಾಕುವಂತೆ ಮನವಿ ಮಾಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಅಧ್ಯಕ್ಷ ಧನಂಜಯ್, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಪಿ.ಚಲುವರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಗವೀಗೌಡ, ವಿ.ಎಸ್.ನಿಂಗೇಗೌಡ, ಎಸ್‌ಎನ್‌ಟಿ ಸೋಮಶೇಖರ್, ಕೆ.ಎಲ್.ಆನಂದ್, ಡೇರಿರಾಮು, ಸೇರಿದಂತೆ ಜೆಡಿಎಸ್-ಬಿಜೆಪಿ ಮುಖಂಡರು ಇದ್ದರು.
ಮತಗಟ್ಟೆ ಕೇಂದ್ರ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ಚಂದ್ರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಸ್ಟಾರ್ ಚಂದ್ರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಾನು ಗೆದ್ದೆ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳ ಮೇಲೆ ನನಗೆ ನಂಬಿಕೆ ಇಲ್ಲ. ಮತದಾರರು ತೀರ್ಪು ನೀಡಿದ್ದಾರೆ. ಅದು ಮಂಗಳವಾರ ಹೊರ ಬರಲಿದೆ. ನಾನು ಗೆದ್ದೆ ಗೆಲ್ಲುತ್ತೇನೆ ಎಂದರು.