-ಜಲಾಶಯ ಹಾಗೂ ಎಂಪಿಸಿಎಲ್ ವಿದ್ಯುತ್ ಸ್ಥಾವರದಿಂದ ಕೃಷ್ಣಾ ನದಿಗೆ ನೀರು
----
ಕನ್ನಡಪ್ರಭ ವಾರ್ತೆ ಕೊಡೇಕಲ್ಕಳೆದೊಂದು ವಾರದಿಂದ ಬಸವಸಾಗರ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವಿನ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ನದಿಗೆ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಭಾನುವಾರ ಜಲಾಶಯದಿಂದ 42 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಗಮನಾರ್ಹ ವಿಷಯವೆಂದರೆ ಪೂರ್ವ ಮುಂಗಾರಿನಲ್ಲಿ ಸುರಿದ ಮಳೆಯಿಂದಾಗಿ ಆಲಮಟ್ಟಿಯ ಆಣೆಕಟ್ಟಿನಿಂದ ನೀರು ಬಿಡದೇ ಇದ್ದರೂ ಸ್ಥಳೀಯವಾಗಿ ಸುರಿದ ಮಳೆಯಿಂದಲೇ ಬಸವಸಾಗರ ಜಲಾಶಯದಲ್ಲಿ 3 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಸವಸಾಗರ ಜಲಾಶಯದ ನೀರಿನ ಸಂಗ್ರಹಮಟ್ಟವನ್ನು ಕಾಯ್ದುಕೊಂಡು ನದಿ ಪಾತ್ರದಲ್ಲಿ ಪ್ರವಾಹ ಭೀತಿಯನ್ನು ತಪ್ಪಿಸುವ ಉದ್ದೇಶದಿಂದ ಜಲಾಶಯದ 14 ಮುಖ್ಯ ಕ್ರಸ್ಟ್ ಗೇಟುಗಳ ಮೂಲಕ 36820 ಕ್ಯೂಸೆಕ ಮತ್ತು ಎಂಪಿಸಿಎಲ್ ಮೂಲಕ 6 ಸಾವಿರ ಕ್ಯೂಸೆಕ್ ಸೇರಿದಂತೆ ಒಟ್ಟು 42820 ಕ್ಯುಸೆಕ್ ನೀರು ಕೃಷ್ಣೆಗೆ ಹರಿಬಿಡಲಾಗುತ್ತಿದೆ.
ಜಲಾಶಯದ ಪ್ರಸ್ತುತ ಸ್ಥಿತಿ: ಬಸವಸಾಗರ ಜಲಾಶಯವು ಗರಿಷ್ಠ ಮಟ್ಟವಾದ 492.252 ಮೀ. ಇದ್ದು ಭಾನುವಾರ ಸಂಜೆ ವೇಳೆಗೆ 490.33 ಮೀ. ಗೆ ತಲುಪಿದೆ. ಗರಿಷ್ಟ 33.313 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ, ಇದೀಗ 25.66 ಟಿಎಂಸಿ ನೀರು ಸಂಗ್ರಹವಿದೆ, ಜಲಾಶಯಕ್ಕೆ ಕಳೆದ ಒಂದು ವಾರದಿಂದ ನಿರಂತರ ಒಳಹರಿವು ಬರುತ್ತಿದ್ದು ಏರಿಳಿತಗಳು ಕಾಣಿಸುತ್ತಿವೆ. ಮಳೆಗಾಲ ಈಗಷ್ಟೇ ಆರಂಭವಾಗಿರುವುದರಿಂದ ಜಲಾಶಯಕ್ಕೆ ಸಾಕಷ್ಟು ಪ್ರಮಾಣದ ಒಳಹರಿವು ಬರುವ ಸಾಧ್ಯತೆಗಳಿರುವುದರಿಂದ ಜಲಾಶಯಕ್ಕೆ ಯಾವುದೇ ಸಮಯದಲ್ಲಿ ಒಳಹರಿವಿನ ಪ್ರಮಾಣ ಅಧಿಕವಾದಲ್ಲಿ ನೀರಿನ ಪ್ರಮಾಣ ಅನುಗುಣವಾಗಿ ನದಿಗೆ ಹರಿಬಿಡುವ ನೀರು ಸಹ ಹೆಚ್ಚು/ಕಡಿಮೆ ಮಾಡಬಹುದಾಗಿದ್ದು, ನದಿ ತೀರದ ಗ್ರಾಮಸ್ಥರು ಜಾಗೃತರಾಗಿರಬೇಕೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
22ವೈಡಿಆರ್16: ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಭಾನುವಾರದಂದು ಜಲಾಶಯದ ಪ್ರಮುಖ 14 ಕ್ರಸ್ಟ್ ಗೇಟುಗಳಿಂದ 42,820 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.