ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಸೇರಿದಂತೆ ಸಿಂದಗಿ, ಮುದ್ದೇಬಿಹಾಳ, ಜಮಖಂಡಿ, ಬಾಗಲಕೋಟೆ ಸೇರಿದಂತೆ ವಿವಿಧ ಸ್ಥಳಗಳಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಬಸವ ಭಕ್ತರು, ಘೋಷಣೆಗಳನ್ನು ಕೂಗುತ್ತ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪುಣೆ-ವಿಜಯಪುರದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ ಹೆಚ್ಚಿನ ಆರ್ಥಿಕ ಅನುದಾನ ನೀಡಿ, ಶರಣ ಸಾಹಿತ್ಯದ ಸಂಶೋಧನೆ ಪರಿಷ್ಕರಣೆ ಪ್ರಕಟಣೆಗೆ ತ್ವರಿತವಾಗಿ ಕಾರ್ಯ ರೂಪಿಸಬೇಕು. ಅಲ್ಲದೇ ಈಗಿರುವ ವೀರಾಗಿಣಿ ಅಕ್ಕಮಹಾದೇವಿ ಅರೆಬೆತ್ತಲೆ ಪುತ್ಥಳಿಯನ್ನು ಕೂಡಲೇ ತೆರುವುಗೊಳಿಸಿ ಆ ಸ್ಥಳದಲ್ಲಿ ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಜಗತ್ತಿನ ದಾರ್ಶನಿಕ ಜಗಜ್ಯೋತಿ ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದರೂ ಸಹಿತ ಜಿಲ್ಲೆಯ ಬಹುತೇಕ ಶರಣರ ಸ್ಮಾರಕಗಳು ನಿರ್ಲಕ್ಷಕ್ಕೆ ಒಳಪಟ್ಟಿವೆ. ಅವುಗಳ ರಕ್ಷಣೆಗೆ ಸರಕಾರ ಮುಂದಾಗಬೇಕು. ನಗರ ಹಾಗೂ ತಾಲೂಕು ಕೇಂದ್ರಗಳ ಪ್ರಮುಖ ಬೀದಿಗಳಿಗೆ ಮತ್ತು ವೃತ್ತಗಳಿಗೆ ಜಿಲ್ಲೆಯ ಶರಣರಾದ ಹಡಪದ ಅಪ್ಪಣ್ಣ, ಅಕ್ಕ ನಾಗಮ್ಮ, ನುಲಿಯ ಚಂದಯ್ಯ ಹಾವಿನಾಳ ಕಲ್ಲಯ್ಯ, ಚೆನ್ನ ಬಸವಣ್ಣ, ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಕುರುಬ ಗೊಲ್ಲಾಳ ಸೇರಿದಂತೆ ಎಲ್ಲ ಶರಣರ ಹೆಸರಿಡಬೇಕೆಂದು ಒತ್ತಾಯಿಸಿದರು.
ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಮುಂದಿನ ದಿನಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬಸವ ಭಕ್ತರೊಡಗೂಡಿ ಉಗ್ರ ಪ್ರತಿಭಟನೆ ಮತ್ತು ಹೋರಾಟ ಕೈಗೊಳ್ಳಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ತೆರಳಿದ ಹೋರಾಟಗಾರರು ಮಹಿಳಾ ವಿವಿ ಕುಲಪತಿಗಳ ಪರವಾಗಿ ಕನ್ನಡ ವಿಭಾಗದ ಮುಖ್ಯಸ್ಥ ಮಹೇಶ ಚಿಂತಾಮಣಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಪ್ರೊ.ರಾಜಶೇಖರ ಪಾಟೀಲಗೆ ಅಕ್ಕಮಹಾದೇವಿ ಮೂರ್ತಿ ಬದಲಿಸಲು ಮೂರು ತಿಂಗಳ ಗಡುವು ನೀಡಿ ಮನವಿ ಸಲ್ಲಿಸಿದರು.