ಮುಂಡರಗಿ: 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಅನುಭವ ಮಂಟಪದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆ ಪೋಷಿಸಿದ ಕಾರಣ ವಚನ ಸಾಹಿತ್ಯ ಮೂಡಿ ಬಂತು ಎಂದು ಕೆಸಿಸಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಎಸ್.ವಿ. ಪಾಟೀಲ ಹೇಳಿದರು.
ಮಾದಾರ ಚೆನ್ನಯ್ಯನವರು ಪಲ್ಲವರ ಮಹಾರಾಜ ಕಂಚಿಯ ಕರಿಕಾಲ ಚೋಳನ ಕುದುರೆ ಲಾಯದಲ್ಲಿ ಕುದುರೆಗಳಿಗೆ ಹುಲ್ಲು ತರುವ ಕಾಯಕ ಮಾಡುತ್ತಿದ್ದ ಶಿವನ ಪರಮ ಭಕ್ತನಾಗಿದ್ದನ್ನು ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಕ.ರಾ. ಬೆಲ್ಲದ ಮಹಾವಿದ್ಯಾಲಯದ ಪ್ರಾ. ಡಾ.ಡಿ.ಸಿ. ಮಠ ಉದ್ಘಾಟಿಸಿ ಮಾತನಾಡಿ, ಕಲ್ಯಾಣದ ಶರಣರಲ್ಲಿ ಸಾಮಾನ್ಯವಾಗಿ ಬಸವಣ್ಣ, ಚೆನ್ನ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯರ ವಚನಗಳನ್ನು ಉಲ್ಲೇಖಿಸುವ ಜನರು ಇನ್ನೂ ಅನೇಕ ಶಿವಶರಣ, ಶಿವಶರಣೆಯರು ವಚನಗಳನ್ನು ರಚಿಸಿದರು ಎಂಬುದನ್ನು ಮರೆತೇ ಹೋಗಿರುವ ಕಾಲದಲ್ಲಿ ಉಪೇಕ್ಷಿತ ವಚನಕಾರರನ್ನು ಕುರಿತ ವಚನ ಮಾಲಿಕೆ ಪ್ರಾರಂಭಿಸಿರುವುದು ಎಲ್ಲರೂ ಮೆಚ್ಚುವಂತದ್ದು ಎಂದರು.ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತ ಎಂದು ಭೇದಭಾವ ಮಾಡದೇ ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುನ್ನಡೆಯಬೇಕು. ಶರಣ ಪರಂಪರೆಯಲ್ಲಿ ಭಕ್ತಿ, ದಾಸೋಹ ಮತ್ತು ಕಾಯಕ ಮುಖ್ಯವಾಗುತ್ತವೆಯೇ ಹೊರತು ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವ ವಿಷಯಗಳಲ್ಲ ಎಂದರು.