ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಸಕಲ ಸಿದ್ಧತೆ: ಡಿಸಿ ಡಾ. ವಿಜಯಮಹಾಂತೇಶ

KannadaprabhaNewsNetwork |  
Published : Mar 20, 2025, 01:15 AM IST
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ವಿಶೇಷ ತಜ್ಞರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ.

ಹಾವೇರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾ. 21ರಿಂದ ಏ. 4ರ ವರೆಗೆ ಜರುಗಲಿದ್ದು, ಜಿಲ್ಲೆಯಲ್ಲಿ ಸುಗಮ, ಸರಳ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆಂತಕ ಪಡದೇ ಧೈರ್ಯವಾಗಿ ಪರೀಕ್ಷೆ ಬರೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರದ ಕಾಲಘಟ್ಟವಾಗಿದ್ದರಿಂದ ಪಾಲಕರ, ಶಿಕ್ಷಕರ ನಿರೀಕ್ಷೆ ಹುಸಿ ಆಗದಂತೆ ಉತ್ತಮ ಫಲಿತಾಂಶ ತರಲು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ 10ನೇ ಸ್ಥಾನದೊಳಗೆ ಬರಬೇಕು ಹಾಗೂ ಶೇ. 80ರ ಫಲಿತಾಂಶದ ಗುರಿ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲೇ ನಿರ್ಣಯಿಸಿದಂತೆ ಡಿ. 31ರೊಳಗೆ ಎಲ್ಲ ವಿಷಯಗಳ ಪಾಠಗಳನ್ನು ಮಾಡಿ ಮುಗಿಸಲಾಗಿದೆ. ವಿದ್ಯಾರ್ಥಿಗಳಿಗೆ ರಜೆ ದಿನಗಳಲ್ಲಿ, ಬೆಳಗ್ಗೆ ಹಾಗೂ ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಲಾಗಿದೆ ಎಂದರು.ವಿದ್ಯಾರ್ಥಿಗಳ ವರ್ಗೀಕರಣ: ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ಲಸ್ಟರ್ ಹಂತದಲ್ಲಿ ನಿಧಾನ, ಸಾಧಾರಣ ಹಾಗೂ ಪ್ರತಿಭಾವಂತ ಮಕ್ಕಳನ್ನು ವರ್ಗೀಕರಿಸಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಪಾಠ ಮಾಡಲಾಗಿದೆ. ಜತೆಗೆ ಮಕ್ಕಳ ಗುಂಪು ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ದಾನಿಗಳ ಸಹಾಯ ಪಡೆದು ಆಸರೆ ಎಂಬ ಪುಸ್ತಕ ಹೊರತರಲಾಗಿದೆ. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳ ಮೇಲೆ ನಿಗಾ ವಹಿಸಲು ಶಿಕ್ಷಕರ ತಂಡ ರಚಿಸಲಾಗಿದೆ, ಪ್ರತಿ ಶನಿವಾರ ರಸಪ್ರಶ್ನೆ ಆಯೋಜನೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದರು.ಅಧಿಕಾರಿಗಳ ನಿಯೋಜನೆ: ಕಳೆದ ಸಾಲಿನಲ್ಲಿ ಶೇ. 40ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ, ಅಂತಹ ಶಾಲೆಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿ ಶಿಕ್ಷಕರಿಗೆ 4 ಮಕ್ಕಳನ್ನು ದತ್ತು ನೀಡಲಾಗಿದೆ. ಜಿಪಂ ಮುಖ್ಯನಿರ್ವಾಹಣಾಧಿಕಾರಿಗಳು ಸಹ ಒಂದು ಶಾಲೆ ದತ್ತು ತೆಗೆದುಕೊಂಡಿದ್ದಾರೆ ಎಂದರು.ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ವಿಶೇಷ ತಜ್ಞರೊಂದಿಗೆ ವಿದ್ಯಾರ್ಥಿಗಳ ಸಂವಾದ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.ಫಲಿತಾಂಶದಲ್ಲಿ ಸುಧಾರಣೆ: ವಿದ್ಯಾರ್ಥಿಗಳಿಗೆ ನಡೆಸಲಾದ ಮೊದಲ ಕಿರುಪರೀಕ್ಷೆಯಲ್ಲಿ ಶೇ. 62, ಎರಡನೇ ಕಿರು ಪರೀಕ್ಷೆಯಲ್ಲಿ ಶೇ.72, ಪ್ರಥಮ ಸಂಕಲನ ಪರೀಕ್ಷೆಯಲ್ಲಿ ಶೇ. 69 ಹಾಗೂ ರಾಜ್ಯಾದ್ಯಂತ ನಡೆಯುವ ಸಿದ್ಧತಾ ಪರೀಕ್ಷೆಯಲ್ಲಿ ಶೇ. 76ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಿರುವುದು ಕಂಡುಬಂದಿದೆ ಎಂದರು.24,736 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 12,585 ಗಂಡು ಹಾಗೂ 12,151 ಹೆಣ್ಣುಮಕ್ಕಳು ಸೇರಿ ಒಟ್ಟು 24,736 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರೆಗ್ಯುಲರ್ ವಿದ್ಯಾರ್ಥಿಗಳು 23,594 ಹಾಗೂ ಖಾಸಗಿ 287 ಮತ್ತು 757 ಪುನಾವರ್ತಿತ ಹಾಗೂ 98 ಖಾಸಗಿ ಪುನಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.ಜಿಲ್ಲೆಯಲ್ಲಿ 200 ಸರ್ಕಾರಿ, 157 ಅನುದಾನಿತ ಹಾಗೂ 102 ಅನುದಾನರಹಿತ ಸೇರಿ 459 ಪ್ರೌಢಶಾಲೆಗಳಿವೆ. ಈ ಪೈಕಿ 32 ಸರ್ಕಾರಿ, 36 ಅನುದಾನಿತ ಹಾಗೂ 12 ಅನುದಾನರಹಿತ ಸೇರಿ 80 ಶಾಲೆಗಳಲ್ಲಿ 1089 ಪರೀಕ್ಷಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಗಾಳಿ, ಬೆಳಕು, ಡೆಸ್ಕ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.ಸುಗಮ ಪರೀಕ್ಷೆ ನಡೆಸಲು ಮುಖ್ಯ ಅಧೀಕ್ಷಕರು- 80, ಉಪ ಮುಖ್ಯ ಅಧೀಕ್ಷಕರು- 14, ಕಸ್ಟೋಡಿಯನ್- 80, ಸ್ಥಾನಿಕ ಜಾಗೃತ ದಳ- 80, ಮಾರ್ಗಾಧಿಕಾರಿಗಳು- 32, ಕೊಠಡಿ ಮೇಲ್ವಿಚಾರಕರು- 1089, ಮೊಬೈಲ್ ಸ್ವಾಧಿನಾಧಿಕಾರಿಗಳು- 80, ಕಚೇರಿ ಸಹಾಯಕರು- 80, ಸಿಸಿ ಟಿಸಿ ತಾಂತ್ರಿಕರು -80, ಸಿಸಿ ಟಿವಿ ವೆಬ್ ಕಾಸ್ಟಿಂಗ್ ತಂಡ 14 ಹಾಗೂ ಡಿ ಗ್ರೂಪ್ 240 ಸೇರಿದಂತೆ ಒಟ್ಟು 1869 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಾಲ್ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ತಾಲೂಕು ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಕ್ರಮ ವಹಿಸಲಾಗಿದೆ. ಪರೀಕ್ಷಾ ಗೌಪ್ಯತೆ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್. ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಉಪಸ್ಥಿತರಿದ್ದರು.

ವೆಬ್‌ಕಾಸ್ಟಿಂಗ್ ವ್ಯವಸ್ಥೆ

ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವೆಬ್‌ಕಾಸ್ಟಿಂಗ್ ವೀಕ್ಷಣೆ ಮಾಡಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ, 17 ಜನ ವೆಬ್ ಕಾಸ್ಟಿಂಗ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು. 200 ಮೀಟರ್ ಪ್ರದೇಶ ನಿಷೇಧ

ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝೆರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲಾಗಿದೆ.ವೈದ್ಯಕೀಯ ಸೌಲಭ್ಯ: ಬೇಸಿಗೆ ಸಮಯವಾಗಿರುವುದರಿಂದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ಯೋಜನೆಗೆ ಕ್ರಮ ವಹಿಸಲಾಗಿದೆ. ಅಗತ್ಯ ಔಷಧೋಪಚಾರ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ