ನೇರ ನಡೆ, ನುಡಿ ಬಸವಾದಿ ಶರಣರ ಮೂಲ ತತ್ವ: ಡಾ. ಮಹಾಂತ ಪ್ರಭು ಸ್ವಾಮಿಗಳು

KannadaprabhaNewsNetwork | Published : Feb 28, 2025 12:47 AM

ಸಾರಾಂಶ

ಜಾತೀಯತೆ, ಅಸಮಾನತೆ, ಶೋಷಣೆ ಇತ್ಯಾದಿ ತಾಂಡವವಾಡುತ್ತಿದ್ದ 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ತತ್ವ, ಚಿಂತನೆಗಳ ಮೂಲಕ ಎಲ್ಲವನ್ನು ತೊಡೆದು ಹಾಕಿ ಜಾತ್ಯತೀತತೆ, ಸಮಾನತೆ ಸ್ಥಾಪಿಸಿದರು.

ಹಾವೇರಿ: ನೇರ ನಡೆ, ನುಡಿ, ನಿಷ್ಠೆಯಿಂದ ಬದುಕುವುದು ಬಸವಾದಿ ಶರಣರ ಮೂಲ ತತ್ವವಾಗಿತ್ತು. ಅನ್ನದ ಮೂಲಕ ದೇಹದ ಹೊರಗೆ ದಾಸೋಹ ಉಣಬಡಿಸಿದರೆ, ಜ್ಞಾನದ ಮೂಲಕ ದೇಹದ ಒಳಗೂ ದಾಸೋಹ ಉಣಬಡಿಸುವ ಮೂಲಕ ಸಾರ್ಥಕತೆ ಮೆರೆದರು ಎಂದು ಪ್ರವಚನಕಾರ ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಸ್ವಾಮಿಗಳು ತಿಳಿಸಿದರು.

ನಗರದ ಸಿಂಧಗಿಮಠದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ೪೫ನೇ ಪುಣ್ಯಸ್ಮರಣೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಶರಣರ ಜೀವನ ದರ್ಶನ ಪ್ರವಚನ ನೀಡಿದರು.

ಜಾತೀಯತೆ, ಅಸಮಾನತೆ, ಶೋಷಣೆ ಇತ್ಯಾದಿ ತಾಂಡವವಾಡುತ್ತಿದ್ದ 12ನೇ ಶತಮಾನದಲ್ಲಿ ಬಸವಾದಿ ಶರಣರು ತಮ್ಮ ತತ್ವ, ಚಿಂತನೆಗಳ ಮೂಲಕ ಎಲ್ಲವನ್ನು ತೊಡೆದು ಹಾಕಿ ಜಾತ್ಯತೀತತೆ, ಸಮಾನತೆ ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಪ್ರವೇಶ ಕಲ್ಪಿಸಿ ಸಮಾನತೆ ಕಾಪಾಡಿದರು.

ಕತ್ತಲೆಯಿಂದ ಕೂಡಿದ್ದ ಅಂದಿನ ಶತಮಾನಕ್ಕೆ ದಿವ್ಯಚೇತನರಾಗಿ ಕಂಗೊಳಿಸಿದರಲ್ಲದೆ ಎಲ್ಲೆಲ್ಲೂ ಶಾಂತಿ ನೆಲೆಸುವಂತೆ ಮಾಡಿ ಅಂದು, ಇಂದು, ಎಂದೆಂದೂ ಶ್ರೇಷ್ಠರಾಗಿದ್ದಾರೆ. ಕೇವಲ ದೇಹದ ಹೊರಗೆ ಶುಭ್ರವಾಗಿದ್ದರೆ ಸಾಲದು, ಆತ್ಮವೆಂಬುದನ್ನು ಪರಿಶುದ್ಧವಾಗಿಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ. ದೇಹದ ಒಳಗೂ ವಿನಯ, ಹೊರಗೂ ವಿನಯದಿಂದ ಬಾಳಬೇಕು ಎಂದರು.ಹೊತ್ತನಹಳ್ಳಿ ಸಿಂಧಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದ ರವಿಕುಮಾರ್ ಆಳಂದ ಅವರಿಂದ ಭಕ್ತಿ ಸಂಗೀತ ನೆರವೇರಿತು. ಹಾರ್ಮೋನಿಯಂ ಸಂಗಮೇಶ್ ಪಾಟೀಲ್, ತಬಲಾ ಸಾಥಿಯಾಗಿ ತೋಟೇಂದ್ರ ಕುಮಾರ್ ಹಾಗೂ ಫಕೀರಯ್ಯ ಶಾಸ್ತ್ರಿಗಳು ತಂಬೂರಿ ಸಾಥ್ ನೀಡಿದರು. ಮಾನಸ ಹಾವನೂರ್ ಹಾಗೂ ಪ್ರೀತಿ ಪತ್ರಿ ಇವರಿಂದ ಭರತನಾಟ್ಯ ಪ್ರದರ್ಶನ ಜರುಗಿತು.

ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಇತರರು ಇದ್ದರು. ಸಿಂಧಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಜಿ.ಎಸ್ .ಭಟ್, ರಾಜಣ್ಣ ಬೆಲ್ಲದ, ರಾಮಯ್ಯ ಬಡೆಕೋಲಾಮಠ, ವಾಗೀಶ ಶಾಸ್ತ್ರಿಗಳು, ಮಹಾಂತೇಶ್ ಹಿರೇಮಠ, ಶಿವಯೋಗಿಯ್ಯ ಹಿರೇಮಠ, ವೀರಣ್ಣ ಮಹಾರಾಜಪೇಟ, ಶಂಕ್ರಣ್ಣ ಇಟಗಿ, ಸಿದ್ದಲಿಂಗಯ್ಯ ಶಾಸ್ತ್ರಿಗಳು, ನಗರಸಭಾ ಸದಸ್ಯ ವೀರಣ್ಣ ಹನುಮನಹಳ್ಳಿ ಇತರರು ಉಪಸ್ಥಿತರಿದ್ದರು.ಮಠ, ಮಂದಿರಗಳು ನೆಮ್ಮದಿಯ ತಾಣಗಳು

ರಾಣಿಬೆನ್ನೂರು: ಮಠ, ಮಂದಿರಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳು ಎಂದು ಲಿಂಗದಳ್ಳಿ ಹಿರೇಮಠದ ವೀರಭದ್ರ ಸ್ವಾಮಿಗಳು ನುಡಿದರು.ತಾಲೂಕಿನ ಹೊಸ ಮುಷ್ಟೂರ ಗ್ರಾಮದ ತ್ರಿವೇಣಿ ಸಂಗಮ ದೇವಸ್ಥಾನದಲ್ಲಿ ಸ್ಥಾಪನೆಯಾದ ಶಿವ ಮತ್ತು ನಂದಿ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೂಡಲ ಸಂಗಮ ಕೇತ್ರದಂತೆ ಇಲ್ಲಿನ ಕ್ಷೇತ್ರವೂ ನಾಡಿನಾದ್ಯಂತ ಖ್ಯಾತಿ ಗಳಿಸಲಿ ಎಂದರು.

ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಪಾಟೀಲ, ಹರಿಹರಗೌಡ ಪಾಟೀಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು.

Share this article