ಬಸವಾದಿ ಶರಣರ ಕಾಯಕ ತತ್ವ ಎಂದಿಗೂ ಚಿರಸ್ಥಾಯಿ: ದಾನೇಶ್ವರ ಶ್ರೀ

KannadaprabhaNewsNetwork |  
Published : Apr 30, 2025, 12:34 AM IST
ಬಸವಾದಿ ಶರಣರ ಕಾಯಕ ತತ್ವ ಯಾವತ್ತೂ ಚಿರಸ್ಥಾಯಿ : ಬಂಡಿಗಣಿಶ್ರೀ. | Kannada Prabha

ಸಾರಾಂಶ

ಬಸವಾದಿ ಶರಣರ ಕಾಯಕ ತತ್ವಗಳು ಯಾವತ್ತೂ ಚಿರಸ್ಥಾಯಿಯಾಗಿದೆ. ಕೇವಲ ಹಣ ಸಂಗ್ರಹವೇ ಉದ್ದೇಶವಾದರೆ ಅದು ಕಾಯಕವಾಗಲಾರದು ಎಂಬುವುದು ಅವರ ಖಚಿತ ಸಂದೇಶವಾಗಿತ್ತೆಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ:

ಬಸವಾದಿ ಶರಣರ ಕಾಯಕ ತತ್ವಗಳು ಯಾವತ್ತೂ ಚಿರಸ್ಥಾಯಿಯಾಗಿದೆ. ಕೇವಲ ಹಣ ಸಂಗ್ರಹವೇ ಉದ್ದೇಶವಾದರೆ ಅದು ಕಾಯಕವಾಗಲಾರದು ಎಂಬುವುದು ಅವರ ಖಚಿತ ಸಂದೇಶವಾಗಿತ್ತೆಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಬಸವ ಜಯಂತಿ ನಿಮಿತ್ತ ನಡೆಯುತ್ತಿರುವ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಯಕಕ್ಕೆ ದೈಹಿಕ ಶ್ರಮದ ಜೊತೆಗೆ ಪಾರಮಾರ್ಥಿಕ ಅರ್ಥ ಕೊಟ್ಟಿದ್ದು ಶರಣರು. ಕೇವಲ ಲೌಕಿಕ ದುಡಿಮೆ ಮಾತ್ರವಲ್ಲದೆ ಅಲೌಕಿಕ ಕರ್ಮದ ಪರಿಭಾಷೆಯೂ ಇದರಲ್ಲಿ ಸೇರಿದೆ. ಕಾಯಕದ ಜೊತೆಗೆ ದಾಸೋಹಕ್ಕೂ ಶರಣರು ಮಹತ್ವ ಕೊಟ್ಟಿದ್ದರು, ಕಾಯಕ ವಸ್ತುನಿಷ್ಠವಲ್ಲ, ಗುಣನಿಷ್ಠವಾದುದು. ಆರ್ಥಿಕತೆಯಲ್ಲಿ ಉತ್ಪಾದನೆ, ಲಾಭ-ಉಳಿತಾಯಗಳ ವರ್ತುಲ ಇದ್ದರೆ ಕಾಯಕದಲ್ಲಿ ಕೇವಲ ಉತ್ಪಾದನೆ ಮತ್ತು ನಿಸ್ವಾರ್ಥ ವಿತರಣೆ ಅಷ್ಟೇ ಇದೆ. ಉಳಿತಾಯ, ಸಂಗ್ರಹ, ಹೂಡಿಕೆ, ಲಾಭ-ನಷ್ಟದ ಮಾತುಗಳು ಶರಣರ ಕಾಯಕ ತತ್ವದಲ್ಲಿಲ್ಲ. ಇದನ್ನೇ ಇಟ್ಟುಕೊಂಡು ಆದರ್ಶಮಯ ಸಮಾಜ ನಿರ್ಮಾಣ ಮಾಡಿದ್ದು ಶರಣರು ಎಂದು ಬಣ್ಣಿಸಿದರು.

ಬಾವಲತ್ತಿಯ ಪೂರ್ಣಾನಂದಮಠದ ವಿಜಯ ವೇದಾಂಗ ಶ್ರೀಗಳು ಮಾತನಾಡಿ, ಶರಣರ ತತ್ವದಲ್ಲಿ ಪ್ರತಿ ವ್ಯಕ್ತಿಗೂ ಕಾಯಕ ಕಡ್ಡಾಯ. ಕಾಯಕವಿಲ್ಲದೆ ದಾಸೋಹ ಮಾಡಲಾಗದು. ಕೇವಲ ಭಕ್ತಿಯಿದ್ದರೆ ಸಾಲದು, ಕಾಯಕದಿಂದ ಬಂದದ್ದು ಮಾತ್ರ ಲಿಂಗಕ್ಕೆ ಅರ್ಪಿತವೆಂಬುದು ಶರಣರ ನಂಬಿಕೆ. ಲಂಚ, ವಂಚನೆಗೆ ಅಲ್ಲಿ ಅವಕಾಶವಿಲ್ಲ. ವಾಮಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದಕ್ಕೆ ಫಲವಿಲ್ಲವೆಂದು ವಿವರಿಸಿದರು.

ವೇದಿಕೆ ಮೇಲೆ ಕೊಣ್ಣೂರುಮಠದ ಶ್ರೀಗಳು, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಜಿಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಸಿದ್ದಪ್ಪ ಪಟ್ಟಿಹಾಳ ಸೇರಿದಂತೆ ಅನೇಕರಿದ್ದರು.

ಹೋಳಿಗೆ ಶೀಕರಣೆ : ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ನೂರಾರು ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರಿಗೆ ಹೋಳಿಗೆ ಶೀಕರಣೆ ಜೊತೆಗೆ ಹಾಲುಗ್ಗಿ, ಚಪಾತಿ, ತುಪ್ಪ ಸೇರಿದಂತೆ ತರಹೆವಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ