ಕಾಯಕ ಜೀವಿಗಳಿಗೆ ವೃತ್ತಿ ಗೌರವ ತಂದುಕೊಟ್ಟ ಬಸವಣ್ಣ

KannadaprabhaNewsNetwork |  
Published : Jan 04, 2026, 01:30 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ      | Kannada Prabha

ಸಾರಾಂಶ

ಎಲ್ಲಾ ವೃತ್ತಿ ಕಾಯಕದವರನ್ನು ಮತ್ತು ಅವರು ಮಾಡುತ್ತಿದ್ದ ವೃತ್ತಿಗೆ ಗೌರವವನ್ನು ಬಸವಣ್ಣ ತಂದುಕೊಟ್ಟಿದ್ದರು. ಅವರಲ್ಲಿ ಶಿವಶರಣ ಮೇದಾರ ಕೇತಯ್ಯ ಕೂಡಾ ವೃತ್ತಿ ಗೌರವಕ್ಕೆ ಪಾತ್ರರಾಗಿದ್ದರೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ: ಎಲ್ಲಾ ವೃತ್ತಿ ಕಾಯಕದವರನ್ನು ಮತ್ತು ಅವರು ಮಾಡುತ್ತಿದ್ದ ವೃತ್ತಿಗೆ ಗೌರವವನ್ನು ಬಸವಣ್ಣ ತಂದುಕೊಟ್ಟಿದ್ದರು. ಅವರಲ್ಲಿ ಶಿವಶರಣ ಮೇದಾರ ಕೇತಯ್ಯ ಕೂಡಾ ವೃತ್ತಿ ಗೌರವಕ್ಕೆ ಪಾತ್ರರಾಗಿದ್ದರೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಶನಿವಾರ ಬೆಳಗ್ಗೆ ಏರ್ಪಡಿಸಿದ್ದ ಶಿವಶರಣ ಮೇದಾರ ಕೇತಯ್ಯನವರ ಜಯಂತಿ ಆಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವ್ಯಕ್ತಿಗೆ ಎಷ್ಟು ಗೌರವ ಅಥವಾ ಪ್ರಾಧಾನ್ಯತೆ ಇತ್ತೋ ವೃತ್ತಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದ ಕಾರಣ ಅಲ್ಲಿ ಅನುಭವ ಮಂಟಪದಲ್ಲಿ ಯಾವುದೇ ವೃತ್ತಿಯನ್ನು ಅಗೌರವದಿಂದ ಕಾಣಲಿಲ್ಲ. ನೂರಾರು ಕಸಬು ಮಾಡುವವರು ಅಲ್ಲಿ ನೆಲೆ ನಿಂತರು. ಈ ಎಲ್ಲರಿಗೂ ಗೌರವ ನೀಡಿದ ಬಸವಣ್ಣನವರ ಸಾಧನೆಗೆ ಕರ್ನಾಟಕ ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಪರಿಗಣಿಸಿ ಮಾನ್ಯತೆ ನೀಡಿದೆ ಎಂದರು. ವಚನ ಸಾಹಿತ್ಯ ದೇಶದ 24 ಭಾಷೆಗಳಿಗೆ ತರ್ಜುಮೆಗೊಂಡಿದೆ. ಅದು ಪ್ರಪಂಚದ ಇತರೆ ಭಾಷೆಗಳಿಗೂ ಭಾಷಾಂತರಗೊಂಡಾಗ ಬಸವಣ್ಣ ಮತ್ತಿತರ ಶರಣರ ವ್ಯಕ್ತಿತ್ವವು ಈ ನಾಡಿಗೆ ತಿಳಿಯುತ್ತದೆ. ಅಂತಹ ಕೆಲಸ ಬಸವ ಸಮಿತಿ ಸೇರಿದಂತೆ ಇತರೆಯವರು ನಡೆಸಿದ್ದಾರೆ. ಪ್ರಪಂಚದ ಬೇರೆಬೇರೆ ದಾರ್ಶನಿಕರು ತಮ್ಮ ತತ್ವ ಸಿದ್ಧಾಂತಗಳ ಮೂಲಕ ಪರಿಚಯವಾದರು. ಆದರೆ ಬಸವಾದಿ ಶರಣರ ವಿಚಾರಗಳು ಅಷ್ಟಾಗಿ ಪ್ರಚಾರ ಪಡೆಯದೆ ಬೆಳಕಿಗೆ ಬರಲಿಲ್ಲ. ಈಗೀಗ ಎಲ್ಲಾ ಕಡೆ ಪಸರಿಸುತ್ತಿದೆ. 12ನೇ ಶತಮಾನದ ಶರಣ ಶಿರೋಮಣಿಗಳಲ್ಲಿ ಒಬ್ಬರಾದ ಮೇದಾರ ಕೇತಯ್ಯನವರು ತಮ್ಮ ವೃತ್ತಿ ಬಿದಿರನ್ನು ಬಳಸಿ ಅನೇಕ ವಿಧವಾದ ವಸ್ತುಗಳನ್ನು ತಯಾರು ಮಾಡುತ್ತಿದ್ದರು. ಇದಕ್ಕೆ ಕೌಶಲ್ಯ ಅಗತ್ಯವಿತ್ತು. ಅಂತಹ ಕೆಲಸದಲ್ಲಿ ನೈಪುಣ್ಯತೆ ಪಡೆದು ಆಕರ್ಷಕ ಮಾದರಿಯ ಕಲಾಕೃತಿಗಳನ್ನು ಹೆಣೆಯುತ್ತಿದ್ದರು. ಇವರು ಮಾಡಿದ ತೊಟ್ಟಿಲು ಹುಟ್ಟುವಾಗ ಬೇಕು. ಸತ್ತಾಗ ಚಟ್ಟ ಕಟ್ಟಲು ಇವರ ನೆರವು ಅಗತ್ಯ. ಇಂತಹ ಕೆಲಸ ಮಾಡುತ್ತಲೇ ಕಾಯಕ, ದಾಸೋಹ, ಜಂಗಮಪ್ರೇಮಿಯಾಗಿ ಜೀವನ ನಡೆಸಿದರು. ಆಗ ವೃತ್ತಿಗಳಾಗಿದ್ದವು ಈಗ ಕಡ್ಡಾಯವಾಗಿ ಜಾತಿಗಳಾಗಿ ಪರಿಗಣಿಸಿ ನೂರಾರು ಜಾತಿಗಳು ಸೃಷ್ಟಿಯಾಗಿರುವುದು ವಿಷಾದಕರ. ವೃತ್ತಿಪರತೆಗಿಂತ ಜಾತಿ ಪ್ರೇಮವೇ ಅತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು. ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ತಾವು ಮಾಡುವ ವೃತ್ತಿಯಲ್ಲಿ ಯಾವುದೇ ತಾರತಮ್ಯ ಎಣಿಸದೆ ಅದಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದ ಶರಣರು ತಾವು ಮಾಡುವ ಕೆಲಸವನ್ನು ತುಂಬಾ ಭಾವಪರವಶತೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು. ನೂರಾರು ವಚನಗಳು ಇದ್ದರೂ ಕೇವಲ 11 ವಚನಗಳು ಗವರೇಶ್ವರಲಿಂಗ ಎಂಬ ಅಂಕಿತದಲ್ಲಿ ರಚನೆಯಾಗಿವೆ. ಶರಣರ ವ್ಯಕ್ತಿತ್ವವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ ಅವರೇ ಸಾಟಿ ಎಂದು ನುಡಿದರು. ಸಮಾಜದ ಮುಖಂಡರಾದ ನಾಗರಾಜ ಸಂಗಂ, ಸಿದ್ದಾಪುರದ ಮಲ್ಲಿಕಾರ್ಜುನಪ್ಪ, ಮುಖ್ಯಶಿಕ್ಷಕಿ ಆಶಾರಾಣಿ, ಬಸವನಗೌಡ ಹಾಜರಿದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಮೇದಾರ ಕೇತಯ್ಯನವರ ವಚನದ ಮೂಲಕ ಪ್ರಾರ್ಥನೆ ಹಾಡಿದರು. ಶಿಕ್ಷಕ ಎಸ್.ರಾಜು ಸ್ವಾಗತಿಸಿದರು. ರಾಜಾನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಶಾಲೆ ದುಬೈ ವಾರ್ಷಿಕೋತ್ಸವಕ್ಕೆ ಗೌರ್ನರ್‌ಗೆ ಆಹ್ವಾನ
ಬಾಯಿಮುಚ್ಕೊಂಡಿದ್ರೆ ಒಳ್ಳೇದು : ಮೂವರು ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ವಾರ್ನಿಂಗ್