ಬದುಕಲ್ಲಿ ಹಲವು ಮಲು ಕಂಡವರು ಬಸವಣ್ಣ: ಚಿಂತಕ ಡಾ.ಮಹೇಂದ್ರಮೂರ್ತಿ

KannadaprabhaNewsNetwork | Published : Nov 4, 2024 12:26 AM

ಸಾರಾಂಶ

ಜಗಜ್ಯೋತಿ ಬಸವಣ್ಣ ಒಂದೇ ಬದುಕಿನಲ್ಲಿ ಹಲವು ಮಜಲುಗಳನ್ನು ಕಂಡವರು. ಕನ್ನಡ ಸಂಸ್ಕೃತಿ ಕಟ್ಟಿದವರಲ್ಲಿ ಪ್ರಮುಖರಾಗಿದ್ದರು ಎಂದು ಚಿಂತಕ ಡಾ. ಮಹೇಂದ್ರಮೂರ್ತಿ ದೇವನೂರು ಅಭಿಪ್ರಾಯಪಟ್ಟರು. ಗುಂಡ್ಲುಪೇಟೆಯಲ್ಲಿ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.

ಶಿವಾನುಭವ ಗೋಷ್ಠಿ

ಗುಂಡ್ಲುಪೇಟೆ: ಜಗಜ್ಯೋತಿ ಬಸವಣ್ಣ ಒಂದೇ ಬದುಕಿನಲ್ಲಿ ಹಲವು ಮಜಲುಗಳನ್ನು ಕಂಡವರು. ಕನ್ನಡ ಸಂಸ್ಕೃತಿ ಕಟ್ಟಿದವರಲ್ಲಿ ಪ್ರಮುಖರಾಗಿದ್ದರು ಎಂದು ಚಿಂತಕ ಡಾ. ಮಹೇಂದ್ರಮೂರ್ತಿ ದೇವನೂರು ಅಭಿಪ್ರಾಯಪಟ್ಟರು.

ತಾಲೂಕಿನ ಮೂಡುಗೂರು ಮಠದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿ, ಬಸವಣ್ಣ ಮನುಷ್ಯರನ್ನು ತಣ್ಣಗಿಡಲು ಪ್ರಯತ್ನಿಸಿದ ಮಹಾತ್ಮರು. ಯುಗ ಪ್ರವರ್ತಕ, ವಚನ ಸಾಹಿತ್ಯದ ಕೇಂದ್ರ ಬಿಂದು, ಮಹಾ ಮಾನವತವಾದಿ ಎಂದು ಹೇಳಿದರು.

ಸಮಾಜ ಸುಧಾರಕ, ಧಾರ್ಮಿಕ ಪುರುಷ, ಆರ್ಥಿಕ ಮತ್ತು ಸಾಹಿತ್ಯ ಸುಧಾರಕ ಬಸವಣ್ಣರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಹಾಗೂ ಅತ್ಯಂತ ಮಹತ್ವದ ವಿಚಾರ ಕೂಡ. ಬಸವಣ್ಣ ಯುಗದ ಉತ್ಸಾಹ, ಸುಖದ ಸಮುದ್ರದಂತೆ ಇದ್ದವರು. ಕನ್ನಡ ನಾಡು-ನುಡಿಗೆ ಸಮಸ್ಯೆ ಬಂದಾಗಲೆಲ್ಲ ನಮಗೆ ಬಸವಣ್ಣನವರಲ್ಲಿ ಪರಿಹಾರ ಸಿಗುತ್ತದೆ. ನಮಗೆ ಅರಿವಾಗದಂತೆ ಬೆಳೆಸುವ ಗುಣ, ವ್ಯಕ್ತಿತ್ವ ಬಸವಣ್ಣನವರ ಸಾಹಿತ್ಯದಲ್ಲಿ ಇದೆ ಎಂದರು.

ದೇಶಕ್ಕೆ ಹೇಗೆ ಸಂವಿಧಾನವಿದೆಯೋ ಹಾಗೆಯೇ ದೇಹಕ್ಕೆ ಬಸವಣ್ಣ ಸಂವಿಧಾನ ಕೊಟ್ಟರು. ಭಕ್ತಿ ಚಳವಳಿಯಲ್ಲಿ ವೈಚಾರಿಕತೆಯನ್ನು ಕಾಣಿಸಿದ ಮಹಾ ಧೀಮಂತರಾಗಿದ್ದರು. ಜನಪ್ರಿಯತೆ ಮತ್ತು ಶ್ರೇಷ್ಠತೆ ಎರಡು ಅವರಲ್ಲಿತ್ತು ಎಂದು ತಿಳಿಸಿದರು.

ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯವನ್ನು ಹೊಸ ದಿಕ್ಕಿಗೆ ಹೊರಳಿಸಿದ ಮಹಾ ವಚನಕಾರ ಬಸವಣ್ಣ. ಸಾಮಾನ್ಯರ ವಸ್ತುವನ್ನು ಮತ್ತು ಭಾಷೆಯನ್ನು ಬಳಸಿ ವಿಶೇಷ ಶೈಲಿ ನಿರೂಪಣೆ ತಂತ್ರಗಳ ಮೂಲಕ ಕನ್ನಡ ಸಾಹಿತ್ಯವನ್ನು ವಿಶಿಷ್ಟ ರೀತಿಯಲ್ಲಿ ದಾಖಲಿಸಿದ ಬಸವಣ್ಣನವರು ಕನ್ನಡ ಸಾಹಿತ್ಯದ ಮೇರು ವಚನಕಾರ ಎಂದು ಬಣ್ಣಿಸಿದರು.

ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನ ಸ್ವಾಮೀಜಿ, ಬಸವ ಪತ್ರಿಕೆಯ ಸಂಪಾದಕ ಶಿವರುದ್ರಪ್ಪ, ಶರಣ‌ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸಪ್ಪ ದೇವರು, ಕಾ.ಸು. ನಂಜಪ್ಪ ಹಾಗೂ ಶರಣರು ಭಾಗವಹಿಸಿದ್ದರು.

Share this article