ಶರಣರ ಬೆಳದಿಂಗಳ ಕಾರ್ಯಕ್ರಮ ಮತ್ತು ಬಸವ ಜಯಂತಿ ಉದ್ಘಾಟನೆ
ಕಾಯಕದ ಮೂಲಕ ದಾಸೋಹದ ಪ್ರಜ್ಞೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಶುಕ್ರವಾರ ತಾಲೂಕಿನ ಬಿ.ಎಂ.ಕೊಪ್ಪಲು ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಯಳನಡು ಮಹಾಸಂಸ್ಥಾನ ಮಠ ಮತ್ತು ಬಿ.ಎಂ. ಕೊಪ್ಪಲು ಗ್ರಾಮಸ್ಥರ ಸಹಯೋಗದಲ್ಲಿ ನಡೆದ ಶರಣರ ಬೆಳದಿಂಗಳ ಕಾರ್ಯಕ್ರಮ ಮತ್ತು ಬಸವ ಜಯಂತಿ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಸವಾದಿ ಶರಣರ ಮಾರ್ಗದರ್ಶನದಲ್ಲಿ ಮಾನವ ಕಲ್ಯಾಣ ಆಶಯಕ್ಕೆ ಅನುಗುಣವಾಗಿ ನಡೆದ ಸಮಗ್ರ ಕ್ರಾಂತಿ ವಿಶ್ವದ ಯಾವುದೇ ಭಾಗದಲ್ಲಿ ಒಮ್ಮೆಲೆ ನಡೆದ ನಿದರ್ಶನಗಳೇ ಇಲ್ಲ. ವಿಶ್ವದಲ್ಲಿ ಕಾಲ ಕಾಲಕ್ಕೆ ಅನೇಕ ರೀತಿ ಕ್ರಾಂತಿಗಳಾಗಿವೆ. ಈ ಹಿನ್ನಲೆಯಲ್ಲಿ ಕಲ್ಯಾಣ ಕ್ರಾಂತಿ ಶರಣರು ಮಾಡಿದ ಸಮಗ್ರ ಕ್ರಾಂತಿ ಹೋಲಿಸಲು ಸಾಧ್ಯವಿಲ್ಲ. ಇದಕ್ಕೆ ಮೂಲ ಕಾರಣ ಮಾನವ ಸಮುದಾಯದ ಎಲ್ಲ ಕ್ಷೇತ್ರಗಳ ಸದಾಶಯಗಳಿಗೆ ಸ್ವಂದಿಸುವ ಕ್ರಾಂತಿಗೆ ನಾಂದಿ ಹಾಡಿದವರು ಬಸವಣ್ಣ ಎಂದು ಬಣ್ಣಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎನ್ ಆನಂದ್ ಮಾತನಾಡಿ, ಬಸವಣ್ಣ ಕಾಯಕ ಬೇಧ ಮತ್ತು ಲಿಂಗ ಬೇಧವಿಲ್ಲದೆ ಜಾತ್ಯಾತೀತ ನೆಲೆಯಲ್ಲಿ ಶರಣರೆಲ್ಲರೂ ಕೂಡಿ ತಮ್ಮ ದಿನನಿತ್ಯದ ಕಾಯಕ ಮತ್ತು ಬದುಕಿನ ಅನುಭಾವದ ಸಂವೇದನೆ ಅನುಭವ ಮಂಟಪದಲ್ಲಿ ಅದೊಂದು ಜ್ಞಾನಪೀಠವಾಗಿತ್ತು. ಜಗತ್ತಿನ ಮನು ಕುಲಕ್ಕೆ ನೀಡಿದಂತಹ ಮಾನವ ಸಂವಿಧಾನ ವಾಗಿತ್ತು. ಜಾತ್ಯಾತೀತ ಸಮಾಜದ ಕಲ್ಪನೆ ಬಸವಣ್ಣನವರ ಕನಸಾಗಿತ್ತು. ಆ ಕನಸನ್ನು ನನಸು ಮಾಡಲು ಜಾತಿ ಜಾತಿಗಳ, ಧರ್ಮ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷ ತೊಲಗಿಸಲು ಇವ ನಮ್ಮವ ಇವ ನಮ್ಮವ ನಿಮ್ಮ ಮನೆಯ ಮಗನೆಂದೆನಿಸಯ್ಯ ಎಂದು ಹೇಳುವ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದವರು ಬಸವಣ್ಣ. ಇಡೀ ಪ್ರಪಂಚದಲ್ಲಿ ಸ್ತ್ರೀ ಸಮಾನತೆ ಜಾರಿಗೆ ತಂದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ ಎಂದರು. ದುಡಿಮೆ ಒಂದಿಷ್ಟು ಪಾಲನ್ನು ದಾಸೋಹದ ಮೂಲಕ ಹಂಚಿ ತಿನ್ನುವ ವ್ಯವಸ್ಥೆ ಆಗಬೇಕು ಎಂದು ಪ್ರತಿಪಾದಿಸಿ,. ದೇಹವನ್ನು ದೇವಾಲಯವಾಗಿಸಿಕೊಂಡು ಜಂಗಮ ತತ್ವ ಪ್ರತಿಪಾದಿಸಿದರು. ಅಲ್ಲದೆ ಸಮನ್ವಯತೆ ಜಾರಿಗೆ ತಂದವರು ಬಸವಣ್ಣ ಎಂದರುಯಳನಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಸಂದೇಶ ನೀಡಿದರು. ಬಿ.ಎನ್ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಕೆ.ಬಿ. ಬಸವರಾಜಪ್ಪ, ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಗಂಗಾಧರ ಶಿವಪುರ, ಎಂ. ಶಾಂತಪ್ಪ, ಬಿ .ಪಿ. ದೇವಾನಂದ್, ಎಂ.ಆರ್. ಪ್ರಕಾಶ್, ಸುಜಾತ ಜಡೆಮಲ್ಲಪ್ಪ, ಎ.ಎಂ. ಕುಮಾರಪ್ಪ, ಬಿ.ಸಿ. ದೇವೇಂದ್ರಪ್ಪ, ಚಟ್ನಳ್ಳಿ ಕಲ್ಲೇಶಪ್ಪ, ಬಿ.ಎನ್ ಬಸವರಾಜಪ್ಪ, ರಾಜಾನಾಯ್ಕ. ತಮ್ಮಯ್ಯಪ್ಪ, ಚಂದ್ರಪ್ಪ ಮತ್ತಿತರಿದ್ದರು.