ಕೊಪ್ಪಳ: ಬಸವಣ್ಣ ಕೇವಲ ಕನ್ನಡ ನಾಡಿನ ಸಾಂಸ್ಕೃತಿ ನಾಯಕ ಅಲ್ಲ, ಈಗಲಾದರೂ ರಾಜ್ಯ ಸರ್ಕಾರ ಮನಸ್ಸು ಮಾಡಿರುವುದು ಶ್ಲಾಘನೀಯ. ಇಂದಲ್ಲ, ನಾಳೆ ಬಸವಣ್ಣ ಅವರನ್ನು ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಣೆ ಮಾಡಿಯೇ ಮಾಡುತ್ತಾರೆ ಎಂದು ಬಸವ ಚಿಂತಕಿ ಗಂಗಾಂಬಿಕೆ ಹೇಳಿದ್ದಾರೆ.
ನಗರದ ಗವಿಮಠ ಆವರಣದಲ್ಲಿ ಬಸವ ಸಮಿತಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊಪ್ಪಳದಲ್ಲಿ ಬಸವ ಜಯಂತಿ ಆಚರಣೆಗೆ 25 ವರ್ಷಗಳ ಸಂಭ್ರಮ ಹಾಗೂ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಸಂಭ್ರಮ. ಇಂಥ ಸಂಭ್ರಮದ ಮಧ್ಯೆ ಬಸವಣ್ಣ ಅವರ ಜಯಂತಿ ಅರ್ಥಪೂರ್ಣವಾಗಿದೆ ಮತ್ತು ಖುಷಿಯನ್ನು ನೀಡುತ್ತದೆ. ಬಸವ ಜಯಂತಿಯನ್ನು ಎಷ್ಟು ವರ್ಷಗಳ ಕಾಲ ಆಚರಣೆ ಮಾಡಬೇಕು ಮತ್ತು ಯಾಕೆ ಮಾಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಉಸಿರು ಇರುವವರೆಗೂ ಬಸವ ಜಯಂತಿ ಆಚರಣೆ ಮಾಡಬೇಕು. ವಚನ ಸಾಹಿತ್ಯ ಜಗತ್ತಿಗೆ ಬೇಕಾಗಿರುವ ಸಾಹಿತ್ಯವಾಗಿದೆ. ಜಗತ್ತನ್ನೇ ಸಂಚಲಿಸಿದ ಸಾಹಿತ್ಯ ಇದ್ದರೆ ವಚನ ಸಾಹಿತ್ಯ. ಎಲ್ಲ ಪ್ರವಾದಿಗಳು ಮಾನವನನ್ನು ದೇವರ ಬಳಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ, ಗುರು ಬಸವಣ್ಣನ ಉದ್ದೇಶ ಮಾನವನ್ನೇ ದೇವಮಾನವನ್ನಾಗಿ ಮಾಡುವುದಾಗಿತ್ತು. ಅಂಥ ಮಹಾನ್ ಶಕ್ತಿ ಅವರು ಎಂದರು.ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಚಿಗರಹಳ್ಳಿ ಮರಳಶಂಕರದೇವರಮಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿಗಳು, ಬಸವ ಚಿಂತಕಿ ಗಂಗಾಂಬಿಕಾ ಇದ್ದರು.ಜೂ. 16ರಂದು ಲಿಂಗಾಯತ ಜಾಗೃತ ಸಮಾವೇಶ: ಕೊಪ್ಪಳ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಜೂ. 16ರಂದು ಬೆಳಗ್ಗೆ 11 ಗಂಟೆಗೆ ಜಾಗತಿಕ ಲಿಂಗಾಯತ ಮಹಾಸಭೆಯ ಜಾಗ್ರತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಗವಿಸಿದ್ದಪ್ಪ ಕೊಪ್ಪಳ ಅವರು ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬಸವ ಪರ ಒಕ್ಕೂಟಗಳು ಮತ್ತು ಲಿಂಗಾಯತ ಒಕ್ಕೂಟಗಳು ಒಂದಗೂಡಿ ಜಾಗ್ರತ ಸಮಾವೇಶ ಹಮ್ಮಿಕೊಂಡಿದೆ. ಲಿಂಗಾಯತರ ಸ್ಥಿತಿಗತಿ ಮತ್ತು ಸ್ಥಾನಮಾನದ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಜಾಮದಾರ, ಬಸವ ಸಮಿತಿ ಅಧ್ಯಕ್ಷ ಅರುಣ ಜತ್ತಿ, ವೈಚಾರಿಕ ಕ್ರಾಂತಿಯ ಮೀನಾಕ್ಷಿ ಬಾಳಿ ಭಾಗವಹಿಸಲಿದ್ದಾರೆ.ಬಸವ ಕಾರುಣ್ಯ ಪ್ರಶಸ್ತಿ: ಜಿಪಂ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ ತೊದಲಬಾಗಿ, ವ್ಯಾಪಾರಿ ರಾಮಣ್ಣ ಸಿಗನಳ್ಳಿ ಹಾಗೂ ಗಾಳೆಮ್ಮ ಕಿಡದಾಳ ಅವರಿಗೆ ಬಸವ ಕಾರುಣ್ಯ ಪ್ರಶಸ್ತಿ ನೀಡಿ, ಗೌರವಿಸಲಾಯಿತು.ಏಳುನೂರಕ್ಕೂ ಹೆಚ್ಚು ಅಮರಗಣಂಗಳ: ಬಸವ ಜಯಂತಿ ನಿಮಿತ್ತ ಬಸವ ಸಮಿತಿ ಹೊರತಂದಿರುವ ಅಮಂತ್ರಣ ಪತ್ರಿಕೆಯೂ ವಿಶೇಷವಾಗಿದೆ. ಕೇವಲ ಅದೊಂದು ಅಮಂತ್ರಣ ಪತ್ರಿಕೆಯಾಗಿರದೆ ಹೊತ್ತಿಗೆಯ ರೂಪದಲ್ಲಿ ತರಲಾಗಿದೆ. ಜಗತ್ತಿನಾದ್ಯಂತ ಗಣ್ಯರು ಬಸವಣ್ಣ ಅವರನ್ನು ಬಣ್ಣಿಸಿದ ಪರಿಯನ್ನು ದಾಖಲಿಸಲಾಗಿದೆ. ಇದಕ್ಕಿಂತ ವಿಶೇಷವಾಗಿ ಬಸವಯುಗದ ಶರಣ-ಶರಣೆಯರು ಹಾಗೂ ಕಾಯಕಜೀವಿಗಳ 700ಕ್ಕೂ ಹೆಚ್ಚು ಅಮರಗಣಂಗಳನ್ನು ಮುದ್ರಿಸಲಾಗಿದ್ದು, ಸಂಗ್ರಹಿಸಿಟ್ಟುಕೊಳ್ಳಬಹುದಾದ ಹೊತ್ತಿಗೆ ರೂಪದ ಅಮಂತ್ರಣ ಪತ್ರಿಕೆಯಾಗಿದೆ.ಬಸವರಾಜ ಬಳ್ಳೊಳ್ಳಿ ಸ್ವಾಗತಿಸಿದರು. ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು.