ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀ ಕಣವಿ ವೀರಭದ್ರೇಶ್ವರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ಜಗಜ್ಯೋತಿ ಬಸವಣ್ಣನವರ ಜಯಂತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟ ದಾಸೋಹ ಪರಂಪರೆ ಜಗತ್ತಿಗೆ ಸಾರಿ ವಿಶ್ವಗುರುವಾದರು. ಬಸವಣ್ಣನವರ ತತ್ವಾದರ್ಶಗಳು, ಚಿಂತನೆಗಳು ಇಂದಿಗೂ ಮಾನವ ಕುಲಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿವೆ ಎಂದರು.ಸಾನ್ನಿಧ್ಯ ವಹಿಸಿದ್ದ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಪಾಲಿಗೆ 12ನೇ ಶತಮಾನ ಬಹಳ ಮಹತ್ವದ್ದು, ಸಮಾಜದಲ್ಲಿ ಹೊಸ ಚಿಂತನೆ ರೂಪಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು, ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯಾ ಇದು ಈ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಭಾವಚಿತ್ರದ ಭವ್ಯ ಮೆರವಣಿಗೆ:ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿಯ ಶ್ರೀ ಬೀಳೂರ ಗುರುಬಸವ ಮಂದಿರದಲ್ಲಿ ಪೂಜೆ ಸಲ್ಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ಭಾವಚಿತ್ರ ಮೆರವಣಿಗೆ ಬಿವಿವಿಎಸ್ ಆವರಣದಿಂದ ಕಾಲೇಜ್ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್, ಸ್ಟೇಶನ್ ರಸ್ತೆ, ಪೊಲೀಸ್ ಚೌಕಿ, ವಲ್ಲಭಭಾಯಿ ಚೌಕ ಸುತ್ತುವರೆದು, ಟಾಂಗಾ ಸ್ಟ್ಯಾಂಡ್, ಪೊಲೀಸ್ ಚೌಕಿ, ಹಳೆಯ ಅಡತ್ ಬಜಾರ್, ಬಸವೇಶ್ವರ ಬ್ಯಾಂಕ್, ಟೀಕಿನಮಠ ಮುಂದೆ ಹಾಯ್ದು ಬೀಳೂರ ಶ್ರೀ ಗುರುಬಸವ ಮಂದಿರ ತಲುಪಿ ಮಂಗಲಗೊಂಡಿತು. ಬಣ್ಣಗಳಿಂದ ಶೃಂಗರಿಸಿದ ನೂರಾರು ಎತ್ತುಗಳು ಮೆರವಣಿಯಲ್ಲಿ ಜನರ ಗಮನ ಸೆಳೆದವು.