ರಾಮನಗರ: 12ನೇ ಶತಮಾನದ ಶ್ರೇಷ್ಠ ದಾರ್ಶನಿಕ, ಸಮಾಜ ಸುಧಾರಕ ಹಾಗೂ ವಚನಕಾರರಾದ ವಿಶ್ವಗುರು ಬಸವಣ್ಣರವರ ಜಯಂತಿಯನ್ನು ಅವರ ಪುತ್ಥಳಿ ಸ್ಥಾಪಿಸುವ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬಸವ ಜಯಂತಿ ಕಾರ್ಯಕ್ರಮದ ದಿನದಂದೇ ನಗರಸಭೆ ಆವರಣದಲ್ಲಿ ಬಸವಣ್ಣನವರ ಪುತ್ಥಳಿಯನ್ನು ಸಿದ್ದಗಂಗಾ ಮತ್ತು ಸುತ್ತೂರು ಶ್ರೀಗಳಿಂದ ಅನಾವರಣಗೊಳಿಸಲಾಗುವುದು. ಹೀಗಾಗಿ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಇಂದೇ ಚಾಲನೆ ನೀಡಿದ್ದು, ಮೇ 8ರೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀಗಳು, ಸುತ್ತೂರು ಶ್ರೀಗಳು, ಬೇವೂರು ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಹ್ವಾನಿಸಲಾಗಿದೆ. ನಗರಸಭೆ ಸದಸ್ಯರ ಸಹಕಾರದಲ್ಲಿ ಅರ್ಥಪೂರ್ಣವಾಗಿ ಜಯಂತಿ ಆಚರಿಸುವ ಮೂಲಕ ಅವರಿಗೆ ಗೌರವಿಸುವ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ತಮ್ಮೆಲ್ಲರ ಸಹಕಾರದಲ್ಲಿ ಎಲ್ಲ ವರ್ಗದವರನ್ನು ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸೋಣ ಎಂದು ತಿಳಿಸಿದರು.ಬಸವಣ್ಣನವರು ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ಅನುಭವ ಮಂಟಪದ ಮೂಲಕ ಜಗತ್ತಿನ ಮೊದಲ ಸಂಸತ್ತಿನ ಪರಿಕಲ್ಪನೆ ನೀಡಿ, ಶರಣರ ವೈಚಾರಿಕ ಚಿಂತನೆಗಳಿಗೆ ವೇದಿಕೆ ಕಲ್ಪಿಸಿದರು. ಅನುಭವ ಮಂಟಪ, ಸಂಸತ್ ಮತ್ತು ಶಾಸನಸಭೆ ತಾಯಿ ಇದ್ದಂತೆ ಎಂದು ಹೇಳಿದರು.
ಸರ್ವ ಸಮಾಜದ ನಾಯಕ:
ಜಗಜ್ಯೋತಿ ಬಸವಣ್ಣನವರನ್ನು ಒಂದು ವರ್ಗಕ್ಕೆ ಸೀಮಿತ ಮಾಡುವುದು ಬೇಡ. ಈ ಕಾರ್ಯಕ್ರಮದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳುವಂತೆ ಮಾಡಬೇಕಿದೆ. ಎಲ್ಲರೂ ಒಂದೇ ಎನ್ನುವ ವಾತಾವರಣವನ್ನು ಬಸವ ಜಯಂತಿ ಕಾರ್ಯಕ್ರಮದಲ್ಲಿ ಸೃಷ್ಟಿ ಮಾಡುವಂತೆ ಮನವಿ ಮಾಡಿದರು.
ರಾ - ಚ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ವೀರಶೈವ ಸಮಾಜದವರು ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಕುರಿತು ಚರ್ಚೆ ನಡೆಸುತ್ತಿತ್ತು. ಆದರೆ, ಯಾವ ಜಾಗದಲ್ಲಿ ಪುತ್ಥಳಿ ಸ್ಥಾಪನೆ ಮಾಡಬೇಕೆಂಬ ಗೊಂದಲ ಇತ್ತು. ಆದರೀಗ ನಗರಸಭೆ ಆವರಣದಲ್ಲಿ ಬಸವಣ್ಣರ ಪುತ್ಥಳಿ ಸ್ಥಾಪನೆಗೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ವೀರಶೈವ ಸಮಾಜದ ಮುಖಂಡ ಚಂದ್ರಶೇಖರ್ ಮಾತನಾಡಿ, ನಗರಸಭೆ ಅಧ್ಯಕ್ಷರಾಗಿ ಕೆ.ಶೇಷಾದ್ರಿರವರು ಎಲ್ಲ ವರ್ಗದ ಜನರನ್ನು ಜೊತೆಯಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
30ಕೆಆರ್ ಎಂಎನ್ 4.ಜೆಪಿಜಿ