ಕರ್ತವ್ಯಗಳಲ್ಲಿ ಮೇಲು ಕೀಳಿಲ್ಲ ಎಂದ ಬಸವಣ್ಣ: ಡಾ.ಎಂ.ಎಸ್.ಆಶಾದೇವಿ

KannadaprabhaNewsNetwork | Updated : Sep 21 2024, 01:48 AM IST

ಸಾರಾಂಶ

ಶಂಕರಘಟ್ಟದ ಕುವೆಂಪು ವಿವಿಯಲ್ಲಿ ಶುಕ್ರವಾರ ಬಸವೇಶ್ವರ ಜಯಂತಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರು ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಸವಣ್ಣನವರು ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಜನರ ನಡುವಿನಿಂದ ಸ್ಥಳೀಯವಾಗಿ ಪರಿಹಾರಗಳನ್ನು ಹುಡುಕಿಕೊಟ್ಟ ಕಾರಣದಿಂದ ಅವರು ಸಾಂಸ್ಕೃತಿಕ ನಾಯಕ ಆದರು ಎಂದು ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಶ್ರೀ ಬಸವೇಶ್ವರ ಅಧ್ಯಯನ ಪೀಠದ ವತಿಯಿಂದ ವಿವಿಯ ಪ್ರೊ. ಎಸ್.ಪಿ.ಹಿರೇಮಠ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನವರು ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಅಸಮಾನತೆ, ಅಸ್ಪೃಶ್ಯತೆ, ವರ್ಗ-ವರ್ಣ-ಲಿಂಗ ತಾರತಮ್ಯಗಳನ್ನು ಬಸವಣ್ಣನವರು ಗುರುತಿಸಿ ಕಾರ್ಯಸಾಧುವಾದ ಪರಿಹಾರೋಪಾಯಗಳನ್ನು ತಿಳಿಸಿಕೊಟ್ಟರು ಹಾಗೂ ನಡೆಯಲ್ಲಿ ಅವನ್ನು ಸಾಧಿಸಿ ತೋರಿದರು ಈ ಕಾರಣವಾಗಿ ಅವರು ಸಾಂಸ್ಕೃತಿಕ ನಾಯಕರಾದರು ಎಂದರು.

ಎಲ್ಲ ಕೆಲಸಗಳೂ ಹೊಟ್ಟೆಪಾಡಿಗಾಗಿ, ಘನತೆಯುತ ಬದುಕಿಗಾಗಿ ಕೈಗೊಳ್ಳುವವಾಗಿವೆ. ಕರ್ತವ್ಯಗಳಲ್ಲಿ ಮೇಲು ಕೀಳು ಎಂಬುದಿಲ್ಲ, ಬದುಕಿನಲ್ಲಿಯೂ ಅದನ್ನು ಅನುಸರಿಸಬಾರದು ಎಂದು ಅರ್ಥೈಸಲು, ಚಿಂತನೆಗೆ ಹಚ್ಚಿದವರಲ್ಲಿ ಬಸವಣ್ಣನವರು ಮೂಲಪುರುಷ. ಬಸವಣ್ಣ ನೀಡಿರುವ ಸಂದೇಶಗಳೇ ಈ ನೆಲದ ದೊಡ್ಡ ಸಂದೇಶ ಎಂದು ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಬಂದಿದ್ದ ಗಾಂಧಿ ನುಡಿದಿದ್ದರು. ಸಮಾನತೆ, ಘನತೆಯ ಆಶಯಗಳನ್ನು ಬಸವಣ್ಣ ಸಾರಿರುವುದು ತನಗೆ ತಡವಾಗಿ ಅರಿವಿಗೆ ಬಂತು ಎಂದು ಅಂಬೇಡ್ಕರ್ ನುಡಿದರು. ಇದು ಬಸವಣ್ಣ ರೂಪಿಸಿದ ಬದುಕಿನ ನವ ವಿಧಾನವಾಗಿತ್ತು ಎಂದು ಐತಿಹಾಸಿಕ ಮಹತ್ವ ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ವಿಭಾಗದ ಅಧ್ಯಕ್ಷ ಪ್ರೊ.ಎಂ.ಗುರುಲಿಂಗಯ್ಯ, ಪ್ರೊ. ಎಸ್‌.ಚಂದ್ರಶೇಖರ್, ಪ್ರೊ. ಬಿ.ಎಚ್‌.ಅಂಜನಪ್ಪ ಮಾತನಾಡಿದರು.

ಒಂದು ದಿನದ ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಕೋಶಾಧ್ಯಕ್ಷ ಡಾ. ಸಂಗಮನಾತ ಎಂ.ಲೋಕಾಪುರ, ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಆರ್.ವಿ.ಚಂದ್ರಶೇಖರ್ ವಿಶೇಷ ಉಪನ್ಯಾಸ ನೀಡಿದರು. ‘ಲಿಂಗಾಯತ ಚಳವಳಿಯಿಂದ ಜ್ಞಾನಲೋಕ ನಿರ್‍ಮಾಣ’

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ಪ್ರತೀ ಭಾಷೆಯು ಒಂದು ಅಸ್ಮಿತೆ, ಜ್ಞಾನಭಂಡಾರ ಹೊಂದಿರುತ್ತದೆ. ಕನ್ನಡ ಭಾಷೆಯಲ್ಲಿ ಜ್ಞಾನಲೋಕವೊಂದು ನಿರ್ಮಾಣವಾಗಲು ಕಾರಣವಾದದ್ದು 12ನೇ ಶತನಮಾನದ ಲಿಂಗಾಯತ ಚಳವಳಿ. ಅದರ ಮೂಲಕ ಕನ್ನಡದಲ್ಲಿ ವಿಶ್ವಜ್ಞಾನ, ಆಲೋಚನೆಗಳು, ತತ್ವ, ಸಾಮುದಾಯಿಕ ಬದುಕು, ಸಾಹಿತ್ಯಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

Share this article