ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಆಡಳಿತದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ಗಲಭೆಗಳು ನಡೆಯುತ್ತಿವೆ. ಪ್ಯಾಲೆಸ್ತೇನ್ ಧ್ವಜ ಹಾಗೂ ಪಾಕಿಸ್ತಾನ ಧ್ವಜ ಹಾರಿಸಲಾಗುತ್ತಿದೆ. ದಾವಣಗೆರೆ, ನಾಗಮಂಗಲದ ಗಲಭೆಗೆ ಕಾರಣರಾದವರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ. ಇಂತಹ ಘಟನೆಗಳು ನಡೆಯುತ್ತಿವೆ. ಜತೆಗೆ ಬಿಜೆಪಿ ನಾಯಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿ ನಾಯಕರನ್ನು ಹೆದರಿಸುವ ಕುತಂತ್ರ ಮಾಡಲಾಗುತ್ತಿದೆ ಎಂದು ದೂರಿದರು.
ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿ ಮಾಂಸದ ಕೊಬ್ಬು, ಮೀನಿನ ಎಣ್ಣೆ ಮಿಶ್ರಣ ಮಾಡಲಾಗಿದೆ ಎಂದು ಚಂದ್ರಬಾಬು ನಾಯ್ಡು ಲ್ಯಾಬ್ ವರದಿ ಆಧಾರದ ಮೇಲೆ ಹೇಳಿಕೆ ನೀಡಿದ್ದಾರೆ. ಇದು ಗಂಭೀರವಾದ ಪ್ರಕರಣ. ಭಕ್ತರ ನಂಬಿಕೆ ಕೆಡಿಸುವ, ದೇವರ ಮೇಲಿನ ನಂಬಿಕೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಿಎಂ ಜಗಮೋಹನ್ ರೆಡ್ಡಿ ಕ್ರಿಶ್ಚಿಯನ್‌ಗೆ ಮತಾಂತರಗೊಂಡವರು. ಹೀಗಾಗಿ ಆತನಿಗೆ ಹಿಂದು ಧರ್ಮದ ಮೇಲೆ ನಂಬಿಕೆ, ವಿಶ್ವಾಸವಿಲ್ಲ. ಹಿಂದು ಧರ್ಮಿಯರ ನಂಬಿಕೆಗೆ ಡಿಸ್ಟರ್ಬ್ ಮಾಡಲಾಗುತ್ತಿದೆ. ಲ್ಯಾಬ್ ವರದಿ ನಿಜವಾಗಿದ್ದರೆ ಜಗನ್‌ಮೋಹನ ರೆಡ್ಡಿ, ಗುತ್ತಿಗೆ ಪಡೆದ ಎಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇದು ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿದೆ ಎಂದು ಹೇಳಿದರು.ಒಂದು ರಾಷ್ಟ್ರ ಒಂದು ಚುನಾವಣೆ ಯೋಜನೆಯನ್ನು ಹಿಂದಿನ ಯಾವ ಸರ್ಕಾರವೂ ಮಾಡಿಲ್ಲ. ಇದು ದೇಶದ ಚುನಾವಣೆಯಲ್ಲಿ ವೆಚ್ಚಕ್ಕೆ ಕಡಿವಾಣ ಹಾಕುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಯುವುದರಿಂದ ಸಮಯ, ಖರ್ಚು ಉಳಿತಾಯವಾಗುತ್ತದೆ. ಇದು ಜಾರಿಯಾದರೆ ದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದರು.