ಕನ್ನಡಪ್ರಭ ವಾರ್ತೆ ಮದ್ದೂರು
ಸಮಾನತೆಯ ಹರಿಕಾರರಾಗಿದ್ದ ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ ವಿರುದ್ಧ ಧ್ವನಿ ಎತ್ತುವ ಮೂಲಕ ಜಗತ್ತಿಗೆ ಸಮಾನತೆ ಸಾರಿದ್ದ ದೈವ ಪುರುಷ ಎಂದು ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಗಂಗಾಧರ್ ಮಂಗಳವಾರ ಬಣ್ಣಿಸಿದರು.ಪಟ್ಟಣದ ವಿವೇಕಾನಂದ ನಗರದ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಕ್ರಾಂತಿಯೋಗಿ ಶ್ರೀಬಸವೇಶ್ವರ ಹಾಗೂ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳ ಜಯಂತಿಯಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜಾತ್ಯತೀತ ಸಮಾಜದ ಕಲ್ಪನೆ, ಕಾಯಕ, ದಾಸೋಹ ಮತ್ತು ಸಿದ್ಧಾಂತಗಳ ಅನುಷ್ಠಾನದ ಚಿಂತನೆಗಳನ್ನು ಬಸವಣ್ಣನವರು ಹೊಂದಿದ್ದರೆ. ಸಿದ್ಧಗಂಗಾ ಮಠದ ಕೀರ್ತಿ ಶೇಷ್ಠ ಶಿವಕುಮಾರ ಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ಮಠವನ್ನು ಜಾತ್ಯತೀತ ನೆಲೆಯಲ್ಲಿ ಕಟ್ಟಿ ಬೆಳೆಸಿದ್ದಾರೆ ಎಂದರು.ಸಿದ್ಧಗಂಗಾ ಶ್ರೀಗಳು ಆರೋಗ್ಯ, ಅನ್ನ ಮತ್ತು ಅಕ್ಷರ ದಾಸೋಹದ ಮೂಲಕ ಮಠದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಪ್ರಾಶಸ್ತ್ಯ ಇಲ್ಲವಾದ ಕಾಲದಲ್ಲಿ ಬಸವಣ್ಣನವರು ಮಹಿಳೆಯರಿಗೆ ಪ್ರಾಶಸ್ತ್ಯ ನೀಡಿದ ಮಹಾನ್ ನಾಯಕ ಎಂದರು.
ಇಂದಿನ ಯುವ ಪೀಳಿಗೆ ಬಸವಣ್ಣನವರ ಆದರ್ಶ ಮತ್ತು ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಚಿಂತನೆ ನಡೆಸಬೇಕು ಎಂದು ಗಂಗಾಧರ್ ಸಲಹೆ ನೀಡಿದರು.ಈ ವೇಳೆ ಸಂಘದ ಉಪಾಧ್ಯಕ್ಷ ವೀರಭದ್ರಸ್ವಾಮಿ, ನಿರ್ದೇಶಕರಾದ ಬಿ.ವಿ.ಮಂಜುನಾಥ್, ತೋಂಟದಾರ್ಯ, ಎಚ್.ಬಿ.ಸ್ವಾಮಿ, ವೀರೇಂದ್ರ, ಮಹದೇವಸ್ವಾಮಿ, ಎಸ್.ಸಿದ್ದಮ್ಮ, ತ್ರಿವೇಣಿ, ಗೌರಿಶಂಕರ, ಬಸವರಾಜು, ಪಿ.ರಾಜಶೇಖರ್, ಸಿದ್ದಲಿಂಗ ಮೂರ್ತಿ, ಶ್ರೀಕಂಠಸ್ವಾಮಿ, ಕಾರ್ಯದರ್ಶಿ ರಾಜಮಣಿ ಹಾಗೂ ಸಂಘದ ಸಿಬ್ಬಂದಿ ಇದ್ದರು.