ಲಕ್ಷ್ಮೇಶ್ವರ: ಜಗ ಬೆಳಗಿದ ಮಹಾ ಬೆಳಕು ವಿಶ್ವಗುರು ಬಸವೇಶ್ವರರು 12ನೇ ಶತಮಾನದಲ್ಲಿಯೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಜಗಜ್ಯೋತಿ ಬಸವೇಶ್ವರರು ಜಗತ್ತು ಕಂಡ ಅಪ್ರತಿಮ ಹೋರಾಟಗಾರ, ಸಮಾಜ ಸುಧಾರಕ, ಧಾರ್ಮಿಕ ಗುರು ಹಾಗೂ ಕ್ರಾಂತಿಕಾರಿ ಎಂದು ಹಿರಿಯ ಸಾಹಿತಿ ಎಸ್.ಎಫ್. ಆದಿ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ, ವಚನಗಳ ಮೂಲಕ ಬಸವಣ್ಣನವರು ಅಂದಿನ ಜಾತಿ ವ್ಯವಸ್ಥೆ, ಮೇಲು, ಕೀಳು, ಬಡವ, ಶ್ರೀಮಂತ, ಅಕ್ಷರಸ್ಥ, ಅನಕ್ಷರಸ್ಥ, ಗಂಡು, ಹೆಣ್ಣು ಎನ್ನುವ ಭೇದಭಾವ ತೊಡೆದು ಹಾಕಿ ಸಮಾನತೆ ಸಾರಿದರು. ಎಲ್ಲ ಸಮುದಾಯದ ವ್ಯಕ್ತಿಗಳನ್ನೊಳಗೊಂಡ ಅನುಭವ ಮಂಟಪ ಸ್ಥಾಪಿಸಿದರು. ಇದುವೇ ಜಗತ್ತಿನ ಮೊದಲ ಸಂಸತ್ ಆಗಿದೆ ಎಂದರು. ವಿಶ್ರಾಂತ ದೈಹಿಕ ಪರಿವೀಕ್ಷಣಾಧಿಕಾರಿ ಆರ್.ಎನ್. ಪಂಚಭಾವಿ ಚಾಕಲಬ್ಬಿ ಅವರ ಮಹಾಮನೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸುತ್ತಿರುವುದು ಅರ್ಥಪೂರ್ಣ. ಏಕೆಂದರೆ 82 ವರ್ಷದ ಶಿವಪುತ್ರಪ್ಪ ಚಾಕಲಬ್ಬಿ ಇಂದಿಗೂ ಕಾಯಕದಲ್ಲಿಯೇ ದೇವರನ್ನು ಕಾಣುತ್ತಿರುವುದು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ, ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ 175 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟನೆ ಮಾಡಿ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮ ಯೋಜಿಸಿದೆ. ಇದಕ್ಕೆ ತಾಲೂಕು ಪರಿಸರದ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು, ಪತ್ರಿಕಾ ವರದಿಗಾರರು ಹಾಗೂ ಕನ್ನಡಾಭಿಮಾನಿಗಳ ಸಹಕಾರ ಹಾಗೂ ಮಾರ್ಗದರ್ಶನವೇ ಮುಖ್ಯ ಕಾರಣ ಎಂದರು.ಹಿರಿಯ ಕಾಯಕ ಜೀವಿ ಶಿವಪುತ್ರಪ್ಪ ಚಾಕಲಬ್ಬಿ, ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್.ಎಫ್. ಆದಿ, ವಿಶ್ರಾಂತ ಶಿಕ್ಷಕಿ ಎಸ್.ಎಂ. ಹಾಳದೋಟದ ಅವರನ್ನು ಸನ್ಮಾನಿಸಲಾಯಿತು. ಶ್ರೀನಿಧಿ ಶಂಕರ ಶಿಳ್ಳಿನ, ವಿಶ್ರಾಂತ ಶಿಕ್ಷಕ ವಿ.ಎಂ. ಹೂಗಾರ ಬಸವೇಶ್ವರರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.