ಕನ್ನಡಪ್ರಭ ವಾರ್ತೆ, ಬೆಂಗಳೂರು
ಕಾಯಕವೇ ಕೈಲಾಸವೆನಿಸಿದ, ಕೀಳಾಗಿ ಕಾಣುವ ಮಹಿಳೆಯರನ್ನು ಗೌರವಿಸಿದ, ಜನವಾಣಿಯನ್ನು ದೈವವಾಣಿಯಾಗಿ ಮಾಡಿದವರು ಬಸವಣ್ಣ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹೇಳಿದರು.ಶುಕ್ರವಾರ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಕರ್ನಾಟಕ ಪ್ರತಿಭಾವರ್ಧಕ ಆಕಾಡೆಮಿ ಆಯೋಜಿಸಿದ್ದ ವಿಶ್ವ ಗುರು ಬಸವೇಶ್ವರ ಜಯಂತಿ ಹಾಗೂ ನಾಡಿನ ಸಾಧಕರಿಗೆ ‘ಕಾಯಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ವಚನ, ಗ್ರಂಥದ ಬಗ್ಗೆ ಓದುವ, ತಿಳಿದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಮಹಾತ್ಮ ಗಾಂಧಿಜೀ ಅವರು 1924ರಲ್ಲಿ ಬೆಳಗಾವಿಗೆ ಭೇಟಿ ಕೊಟ್ಟಾಗ ಬಸವಣ್ಣನವರ ಮೇಲೆ ಜಾತಿ ನೆರಳು ಬಿದ್ದಿಲ್ಲ ಅವರ ತತ್ವ ಸಿದ್ಧಾಂತಗಳನ್ನು ಮೌಲ್ಯಗಳನ್ನು ಅಳವಡಿಸಿಕೊಂಡರೆ ದೇಶ ಮುನ್ನಡೆಯಲು ಸಾಧ್ಯ ಎಂದು ಹೇಳಿದ್ದರು ಎಂದು ಸ್ಮರಿಸಿದರು.ಮೊದಲು ನಾವು ಒಳ್ಳೆಯ ಮನುಷ್ಯರಾಗಿ ಇರಬೇಕಾಗುತ್ತದೆ. ಪ್ರಶಸ್ತಿ ಕೊಡುವವರಿಗೆ ಗೌರವ ಇರಬೇಕು. ತೆಗೆದುಕೊಳ್ಳುವವರು ಗೌರವದಿಂದ ಇರಬೇಕು, ಆಗ ಮಾತ್ರ ಸಾರ್ಥಕ. ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಪ್ರತಿಭಾನ್ವಿತರನ್ನು ಪ್ರತಿಭಾವರ್ಧಕ ಸಂಸ್ಥೆ ಗುರುತಿಸಿ ಸನ್ಮಾನಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಒಳ್ಳೆಯ ಕಾರ್ಯ ಎಂದರು.ಕಾಯಕ ರತ್ನ ಪ್ರಶಸ್ತಿ:
ಖ್ಯಾತ ಗಾಯಕಿ ಬಿ.ಕೆ.ಸುಮಿತ್ರಾ, ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷರಾದ ಶಾಂತ ತಿಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಬಿ.ದುರುಗಪ್ಪ, ವಚನ ಗಾಯಕಿ ಅರುಣಾ ಚಂದ್ರಶೇಖರ್ ಅವರಿಗೆ ‘ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಓಂಕಾರ ಆಶ್ರಮದ ಮಧುಸೂಧನಾಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ವೂಡೇ ಪಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.