ವಚನಗಳಲ್ಲಿ ಜೀವನ ಸತ್ಯ ತಿಳಿಸಿದ ಬಸವಣ್ಣ ಮನುಕುಲಕ್ಕೆ ದಾರಿದೀಪ

KannadaprabhaNewsNetwork |  
Published : Apr 21, 2026, 01:15 AM IST
ಷಷ | Kannada Prabha

ಸಾರಾಂಶ

ಚಿಕ್ಕಮಗಳೂರುವಿಶ್ವಗುರು ಬಸವಣ್ಣನವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಜೀವನದ ಸತ್ಯಗಳನ್ನು ವಚನಗಳಲ್ಲಿ ತಿಳಿಸುವ ಮೂಲಕ ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದು ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್ ತಿಳಿಸಿದರು.

ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿಶ್ವಗುರು ಬಸವಣ್ಣನವರು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ ಜೀವನದ ಸತ್ಯಗಳನ್ನು ವಚನಗಳಲ್ಲಿ ತಿಳಿಸುವ ಮೂಲಕ ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದು ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್ ತಿಳಿಸಿದರು.

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 8ನೇ ವಯಸ್ಸಿನಲ್ಲಿ ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಮಹಾನ್ ಪುರುಷ ವಿಶ್ವಗುರು ಬಸವಣ್ಣ. ತನಗೆ ಜನಿವಾರ ಧಾರಣೆ ಮಾಡುವುದಾದರೆ ಅಕ್ಕ ನಾಗಮ್ಮನಿಗೆ ಜನಿವಾರ ಧಾರಣೆ ಏಕಿಲ್ಲ ಎಂದು ಪ್ರಶ್ನಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಬಾಲ್ಯದಲ್ಲಿಯೇ ಮುನ್ನುಡಿ ಬರೆದಿದ್ದರು.ಕಾಯಕವೇ ಕೈಲಾಸ ಎಂದು ಪ್ರತಿಪಾದಿಸಿದ ಬಸವಣ್ಣ ಕೆಲಸದಲ್ಲಿಯೇ ದೇವರನ್ನು ಕಾಣುವಂತೆ ಜನರಲ್ಲಿ ಅರಿವು ಮೂಡಿಸಿ ದ್ದರು. ಯಾವ ಕೆಲಸವೂ ಮೇಲಲ್ಲ, ಯಾವ ಕೆಲಸವೂ ಕೀಳಲ್ಲ ಎಂದು ಸಾರಿದರು. ಪ್ರಪಂಚದ ಮೊದಲ ಸಂಸತ್ ಅನುಭವ ಮಂಟಪವನ್ನು ಕಟ್ಟಿದ್ದು ಬಸವಣ್ಣನವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಯಾರು ಜಾತೀಯತೆ ನಿವಾರಿಸಲು ಶ್ರಮಿಸಿದರೋ ಅವರನ್ನು ಇಂದು ಜಾತಿಯ ಚೌಕಟ್ಟಿನಲ್ಲಿ ಬಂಧಿಸುತ್ತಿರುವುದು ಅವರ ತತ್ವ ಹಾಗೂ ಆದರ್ಶಗಳಿಗೆ ಮಾಡುತ್ತಿರುವ ಅಗೌರವ.. ಬಸವಣ್ಣನವರು ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂದಿದ್ದರು. ಆದರಿಂದು ನಾವು ಸ್ಥಾವರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆಯೇ ಹೊರತು ಜಂಗಮ ತತ್ವ ಅಳವಡಿಸಿಕೊಳ್ಳುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಜಂಗಮ ತತ್ವವನ್ನು ಎಲ್ಲರೂ ಅಳವಡಿಸಿಕೊಂಡಿದ್ದೆ ಆಗಿದ್ದಲ್ಲಿ 800 ವರ್ಷಗಳಲ್ಲಿ ಎಲ್ಲರ ಮನೆ ಹಾಗೂ ಮನಗಳು ಬೆಳಗುತ್ತಿದ್ದವು. ಕ್ರಾಂತಿ ಎಂದರೆ ಸದ್ವಿಚಾರಗಳಿಂದ ಕೂಡಿರುವುದು. ಸಮಾಜಕ್ಕೆ ಉತ್ತಮ ದಿಕ್ಕನ್ನು ತೋರಿ ಸದ್ವಿಚಾರಗಳನ್ನು ಹರಡುವುದು ಕ್ರಾಂತಿ. ಆದರೆ ಇಂದು ಮರ್ಯಾದ ಹತ್ಯೆ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ತಪ್ಪು. 12ನೇ ಶತಮಾನದಲ್ಲಿ ಬಸವಣ್ಣನವರು ಸಮಸಮಾಜ ನಿರ್ಮಾಣಕ್ಕೆ ಹೋರಾಟ ನಡೆಸಿದರೆ, 20ನೇ ಶತಮಾನದಲ್ಲಿ ಅಂಬೇಡ್ಕರ್ ಅವರು ಬಸವಣ್ಣನವರ ವಿಚಾರಧಾರೆಗಳಿಗೆ ಸಂವಿಧಾನದ ಮೂಲಕ ಅಧಿಕೃತ ಮುದ್ರೆ ಒತ್ತಿದರು ಎಂದರು.

ಬಸವಣ್ಣನವರು ಒಬ್ಬ ಧಾರ್ಮಿಕ ಚಿಂತಕನಾಗಿರಲಿಲ್ಲ ಬದಲಿಗೆ ಒಬ್ಬ ಸಮಾಜ ಸುಧಾರಕರಾಗಿದ್ದಾರೆ. ನಡತೆ ಸರಿಯಿಲ್ಲದಿದ್ದರೆ ಬದುಕೇ ವ್ಯರ್ಥ ಎಂದು ಬಸವಣ್ಣನವರು ಹೇಳಿದ ಮಾತು ಇಂದಿಗೂ ಸತ್ಯವಾಗಿದೆ. ಮಹಾನ್ ಪುರುಷರ ವಿಚಾರಧಾರೆಗಳಿಗೆ ಕೊನೆಯಿಲ್ಲ. ಜಗತ್ತು ಇರುವವರೆಗೆ ಜೀವಂತವಾಗಿರುತ್ತವೆ ಎಂದು ಹೇಳಿದರು.

ಬಸವೇಶ್ವರರ ಕುರಿತು ಸಾಹಿತಿ ತಿಪ್ಪೆರುದ್ರಪ್ಪ ಉಪನ್ಯಾಸ ನೀಡಿದರು. ಈ ವೇಳೆ ತಾಲೂಕು ದಂಡಾಧಿಕಾರಿ ರೇಷ್ಮಾ ಶೆಟ್ಟಿ, ಡಿವೈಎಸ್‌ಪಿ ನಾಗರಾಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಉಪಸ್ಥಿತರಿದ್ದರು.----ಬಾಕ್ಸ್---

ಬಸವೇಶ್ವರ ಜಯಂತಿಯಲ್ಲಿ ಕುರ್ಚಿ ಖಾಲಿ ಖಾಲಿಜಿಲ್ಲಾಡಳಿತದಿಂದ ಸೋಮವಾರ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜನರೇ ಇರಲಿಲ್ಲ. ವೇದಿಕೆ ಮುಂಭಾಗದ ಒಂದು ಸಾಲಿನ ಕುರ್ಚಿಗಳು ಭರ್ತಿಯಾಗಿರಲಿಲ್ಲ. ಇಡೀ ಸಭಾಂಗಣದಲ್ಲಿ ಅತಿಥಿ ಗಣ್ಯರ ಹಿಂಬಾಲಕರು, ಪೊಲೀಸರು, ವಿವಿಧ ಸಂಘಟನೆ ಪದಾಧಿಕಾರಿಗಳು ಸೇರಿದಂತೆ 50 - 60 ಮಂದಿ ಮಾತ್ರ ಉಪಸ್ಥಿತರಿದ್ದರು. ಅತಿಥಿಗಳು ಮತ್ತು ಗಣ್ಯರು ಕೇವಲ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವಂತಾಯಿತು.

ಇದನ್ನು ಗಮನಿಸಿದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಇತ್ತೀಚಿನ ದಿನಗಳಲ್ಲಿ ಮಹಾನ್ ಪುರುಷರ ಜಯಂತಿಗಳು ಸಾಂಕೇತಿಕವಾಗಿ ನಡೆಯುವಂತಾಗಿರುವುದು ಬೇಸರದ ಸಂಗತಿ ಎಂದರು. ಇನ್ನು ಶಾಸಕ ತಮ್ಮಯ್ಯ, ಮಹಾನ್‌ ಪುರುಷರ ಜಯಂತಿ ಸಮಾರಂಭದ ಬಗ್ಗೆ ತಾವೂ ಸಹ ಕಾಳಜಿ ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

-- ಬಾಕ್ಸ್ --

ಜಯಂತಿ ಆಚರಣೆ ಬಗ್ಗೆ ಸಭೆ ನಡೆಸಿಲ್ಲ, ಆಹ್ವಾನಿಸಿಲ್ಲ

ಬಸವೇಶ್ವರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಂಘ ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸಭೆ ನಡೆಸಿಲ್ಲ. ಕಾರ್ಯಕ್ರಮಕ್ಕೆ ಗಣ್ಯರು ಮತ್ತು ಸಾರ್ವಜನಿಕರನ್ನು ಗೌರವಾನಿತ್ವವಾಗಿ ಆಹ್ವಾನಿಸದಿರುವುದು ಈ ಅಚಾತುರ್ಯಕ್ಕೆ ಮುಖ್ಯ ಕಾರಣ ಎಂಬ ಅಭಿಪ್ರಾಯ ಸಭಾಂಗಣದಲ್ಲಿ ಕೇಳಿ ಬಂತು.

-- ಕೋಟ್‌ --

ಬಸವಣ್ಣನವರ ಫೋಟೋ ಮನೆಯೊಳಗೆ ಬಂತೇ ಹೊರತು ಅವರ ವಿಚಾರಧಾರೆಗಳು ಮನದೊಳಗೆ ಬರಲಿಲ್ಲ. ಇದೇ ಕಾರಣ ದಿಂದಾಗಿ ಇಂದಿಗೂ ಜಾತಿ ವ್ಯವಸ್ಥೆ ಹಾಗೆಯೇ ಉಳಿದಿದೆ. ಪ್ರತಿಯೊಬ್ಬರು ತಮ್ಮ ಮನೆ ಕತ್ತಲೆಯನ್ನು ದೂರ ಮಾಡಿಕೊಂಡರೆ ಸಮಾಜದ ಕತ್ತಲು ದೂರವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

- ಡಾ.ಸಿ.ಟಿ.ರವಿ, ವಿಧಾನಪರಿಷತ್‌ ಸದಸ್ಯಫೋಟೊ: 1. ಬಸವ ಜಯಂತಿ ಕಾರ್ಯಕ್ರಮದಲ್ಲಿ ಜನರೇ ಇರದೆ ಮುಂಭಾಗದ ಒಂದು ಸಾಲಿನ ಕುರ್ಚಿಗಳು ಭರ್ತಿಯಾಗಿರಲಿಲ್ಲ

ಫೋಟೊ:2. ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಕೆಪೆಕ್ ಅಧ್ಯಕ್ಷ ಬಿ.ಎಚ್.ಹರೀಶ್ಉದ್ಘಾಟಿಸಿದರು. ಸಿಟಿ ರವಿ, ತಮ್ಮಯ್ಯಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಿ
ಬಸವಣ್ಣ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹನೀಯ