ಶಿಗ್ಗಾಂವಿ: ಸೂರ್ಯ, ಭೂಮಿ ಇರುವವರಗೆ ಮಾನವಕುಲಕ್ಕೆ ಸನ್ಮಾರ್ಗವನ್ನು ಶರಣ ಸಂತರು ನೀಡಿದ್ದು, ರಾಜಕಾರಣದಲ್ಲಿ ಇದ್ದವರು ಸಣ್ಣ ಸಮುದಾಯವನ್ನು ಕಡೆಗಣಿಸಿ ದೊಡ್ಡ ಸಮುದಾಯಗಳನ್ನು ಬೆನ್ನು ಹತ್ತುತ್ತೇವೆ, ಈ ಹಿಂದಿನ ಎಲ್ಲ ಸರ್ಕಾರಗಳು ಈ ಸಮಾಜವನ್ನು ಹತ್ತಿಕ್ಕುತ್ತಾ ಬಂದಿವೆ. ಜಾತಿ ವ್ಯವಸ್ಥೆ ಹೋಗುವವರೆಗೂ ಬಸವಣ್ಣನವರ ಕನಸು ಈಡೇರುವುದಿಲ್ಲ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜಸೇವಾ ಸಂಘ ಶಿಗ್ಗಾಂವಿ ಮತ್ತು ಸವಣೂರ ತಾಲೂಕು ವತಿಯಿಂದ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ೮೯೦ನೇ ಜಯಂತ್ಯುತ್ಸವ ಹಾಗೂ ಜಿಲ್ಲಾಮಟ್ಟದ ಸಮಾವೇಶ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಎಲ್ಲರೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬಂದಾಗ ಮದುವೆಗಳು ಉದ್ಯೋಗಾಧಾರಿತವಾಗಿ ನಡೆದು ಜಾತಿ ವ್ಯವಸ್ಥೆ ಕಡಿಮೆಯಾಗುತ್ತದೆ. ಸಮಾಜದ ಬೇಡಿಕೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ತಂಗಡಗಿ ಮಠದ ಶಿಷ್ಯನಾಗಿ ಸಮಾಜಕ್ಕೆ ಮೋಸವಾದಾಗ ಗಟ್ಟಿ ಧ್ವನಿಯಾಗಿ ನಿಲ್ಲುತ್ತೇನೆ, ನಾವು ವಿರೋಧ ಪಕ್ಷದಲ್ಲಿ ಇದ್ದರೂ ಸಮಾಜಕ್ಕೆ ನನ್ನ ಮೇಲೆ ನಂಬಿಕೆ ಇದೆ, ತಂಗಡಗಿ ಮಠಕ್ಕೆ ೩ ಕೋಟಿ ಅನುದಾನವನ್ನು ಮುಖ್ಯಮಂತ್ರಿ ಇದ್ದಾಗ ನೀಡಲಾಗಿತ್ತು, ಅದರಲ್ಲಿ ೭೫ ಲಕ್ಷ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಹಣ ಬಿಡುಗಡೆಯಾಗಿಲ್ಲ. ತಾಲೂಕಿನ ಸಮಾಜದ ಬೇಡಿಕೆಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿ, ೨೧ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ನಿಮ್ಮೆಲ್ಲ ಪ್ರಯತ್ನಗಳೊಂದಿಗೆ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂದರು.ಈ ಮೊದಲು ಶ್ರೀ ನಿಜಸುಖಿ ಹಡಪದ ಅಪ್ಪಣ್ಣನವರ ಸ್ತಬ್ಧ ಭಾವಚಿತ್ರದ ಮೆರವಣಿಗೆ ಪಟ್ಟಣದ ಹುಲಗೂರ ರಸ್ತೆಯ ಪಾದಗಟ್ಟಿಯಿಂದ ಪ್ರಾರಂಭವಾಗಿ, ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಸವಣೂರ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಂಗಡಗಿ ಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ಮತ್ತು ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪಾ ಹಡಪದ, ಜಿಲ್ಲಾಧ್ಯಕ್ಷ ಷಣ್ಮೂಖಪ್ಪ ಕಾಯಕದ, ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಹಡಪದ, ಹರೀಶ ಕ್ಷೌರದ, ಗೌರವಾಧ್ಯಕ್ಷ ಬಸವರಾಜ ಹಡಪದ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣಾ ಬೇವಿನಮರದ, ಮಾಜಿ ಸಚಿವ ಆರ್. ಶಂಕರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೇರಲಗಿ, ಕೆಪಿಸಿಸಿ ಸದಸ್ಯ ಯಾಸೀರಖಾನ ಪಠಾಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ, ಸಿಎಂ ಪೈಝ್, ಬಸವನಗೌಡಾ ಪಾಟೀಲ, ಮೋಹನ್ ಚಂದಪ್ಪನವರ, ಮಾಜಿ ಲಿಡ್ಕರ ನಿಗಮದ ಅಧ್ಯಕ್ಷ ಡಿ.ಎಸ್. ಮಾಳಗಿ, ಶಶಿಧರ ಯಲಿಗಾರ, ಉಪನ್ಯಾಸಕ ಶಶಿಕಾಂತ ರಾಠೋಡ, ಸುರೇಶ ಎಂ ಕೆ,. ಮಾರುತಿ ಹಡಪದ ಇತರರಿದ್ದರು.