- ಕುಡಿಯುವ ನೀರಿನ ತೀವ್ರ ಸಮಸ್ಯೆ ಖಂಡಿಸಿ ಪ್ರತಿಭಟಿಸಿದ್ದ ಜನ ಖುಷ್ । ಗ್ರಾಮಸ್ಥರ ಪಾಲಿಗೆ ಭಗೀರಥನಾದ ಸಚಿವ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕುಡಿಯುವ ನೀರಿನ ತೀವ್ರ ಸಮಸ್ಯೆ ಉಲ್ಭಣವಾಗಿರುವ ತಾಲೂಕಿನ ಗುಡಾಳ್ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಬುಧವಾರ ತೆರಳಿ, ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯೊಂದನ್ನು ಬಾಡಿಗೆ ಪಡೆಯುವ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಸಲು ಮುಂದಾಗಿದ್ದಾರೆ.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗುಡಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿನಕ್ಕೂ ಹೆಚ್ಚುತ್ತಿದ್ದು, ಎರಡು ಕೊಳವೆಬಾವಿ ಕೊರೆಸಿದರೂ ನೀರಿನ ಸಮಸ್ಯೆಗೆ ಮುಕ್ತಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್.ಬಸವಂತಪ್ಪ ಅವರು, ವೈಯಕ್ತಿಕವಾಗಿ ಮುಂಗಡ ಹಣ ಪಾವತಿಸಿ, ಗ್ರಾಮದ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು, ಗ್ರಾಮಸ್ಥರಿಗೆ ನೀರು ಪೂರೈಸಲು ಮುಂದಾಗಿ, ಮಾನವೀಯತೆ ಮೆರೆದರು.
ಕೆಲ ದಿನಗಳ ಹಿಂದೆ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟಿಸಿದ್ದರು. ವಿಷಯ ತಿಳಿದ ಸಚಿವ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ದುಸ್ಥಿತಿ ಗಮನಿಸಿದರು. ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರು, ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಬಸವಂತಪ್ಪ, ಗ್ರಾಮದಲ್ಲಿ ನೀರು ಲಭ್ಯವಿರುವ ಖಾಸಗಿ ಕೊಳವೆಬಾವಿ ಮಾಲೀಕರ ಜೊತೆಗೆ ಚರ್ಚಿಸಿ, ತಿಂಗಳ ಬಾಡಿಗೆ ಆಧಾರದ ಒಪ್ಪಂದ ಮಾಡಿಕೊಂಡು, ತಾವೇ ಹಣ ಕೊಟ್ಟು, ನೀರು ಪೂರೈಸಲು ಮುಂದಾಗಿದ್ದಾರೆ.
ಗ್ರಾಮೀಣ ನೀರು ಪೂರೈಕೆ ಇಲಾಖೆ ಇಂಜಿನಿಯರ್ ಮಾಳಪ್ಪ, ಗ್ರಾಪಂ ಆಡಳಿತಾಧಿಕಾರಿ ಮಲ್ಲೇಶ ನಾಯ್ಕ, ಪಿಡಿಒ ಸುರೇಶ, ಗ್ರಾಮಸ್ಥರಾದ ವೆಂಕಟೇಶಪ್ಪ, ಶಂಭುಲಿಂಗಪ್ಪ, ರುದ್ರೇಶಣ್ಣ, ಕಲ್ಲೇಶಪ್ಪ, ಲೋಕೇಶ ಸೇರಿದಂತೆ ಗ್ರಾಮಸ್ಥರು ಇದ್ದರು.
(ಬಾಕ್ಸ್)
ಸಚಿವ ಕೆ.ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅನುದಾನ ಮೀಸಲಿಟ್ಟಿದ್ದು, ನೀರಿಗೆ ಯಾವುದೇ ಅನುದಾನದ ಕೊರತೆಯಿಲ್ಲ. ನೀರು ಲಭ್ಯ ಪ್ರದೇಶದಲ್ಲಿ ಹೊಸ ಬೋರ್‌ವೆಲ್ ಕೊರೆಸಬೇಕು. ಅಂತರ್ಜಲ ಲಭ್ಯವಿಲ್ಲದ ಕಡೆ ಖಾಸಗಿ ಬೋರ್‌ವೆಲ್ ಬಾಡಿಗೆಗೆ ಪಡೆದು, ಜನರಿಗೆ ಕುಡಿಯುವ ನೀರು ಪೂರೈಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಬೇಕು ಎಂದು ತಾಕೀತು ಮಾಡಿದರು.
- - -
ಸಮಸ್ಯೆ ಹೇಳಿಕೊಂಡು ಸಚಿವರ ಬಳಿ ಹೋದರೆ ಭೇಟಿ ಕಷ್ಟವೆಂಬ ಮಾತು ಸಾಮಾನ್ಯ. ಆದರೆ ನಮ್ಮ ಕ್ಷೇತ್ರದ ಶಾಸಕ ಸಚಿವ ಕೆ.ಎಸ್.ಬಸವಂತಪ್ಪ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಜನರ ನೆರವಿಗೆ ಧಾವಿಸುತ್ತಾರೆ. ಇಂತಹ ಸಚಿವರನ್ನು ಪಡೆದ ನಾವೇ ಧನ್ಯರು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಮ್ಮ ಗ್ರಾಮದ ನೀರಿನ ದಾಹ ನೀಗಿಸಿದ ಭಗೀರಥರಂತೆ ಸಚಿವರು ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
- ವೆಂಕಟೇಶಪ್ಪ, ಗ್ರಾಮದ ಹಿರಿಯ, ಗುಡಾಳ್.- - -
-18ಕೆಡಿವಿಜಿ3: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗುಡಾಳ್ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಸಚಿವ ಕೆ.ಎಸ್.ಬಸವಂತಪ್ಪ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸುವ ಮೂಲಕ ಸ್ಪಂದಿಸಿದರು.