ನಿಧಾನವಾಗಿ ಅನಾವರಣಗೊಳ್ಳುತ್ತಿದೆ ಬರದ ಭೀಕರತೆ

KannadaprabhaNewsNetwork |  
Published : Nov 19, 2026, 01:30 AM IST
18ಕೆಪಿಆರ್‌ಸಿಆರ್‌ 01: | Kannada Prabha

ಸಾರಾಂಶ

ಒಂದೆಡೆ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ದಿನೇ ದಿನೆ ಜಿಲ್ಲೆಯಲ್ಲಿ ಬರದ ಭೀಕರತೆಯು ನಿಧಾನವಾಗಿ ಅನಾವರಣಗೊಳ್ಳುತ್ತಿದೆ. ಒಂದೆಡೆ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನೀರಿಗಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜಿಲ್ಲೆಯ ಜನಜೀವನದ ಮೇಲೆ ಬರದ ಕರಿನೆರಳು ಆವರಿಸುತ್ತಿದೆ.

ಜಿಲ್ಲೆಯ ಪ್ರಮುಖ ಕೃಷಿ ಆಧಾರಿತ ಪ್ರದೇಶಗಳಾದ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ ಬಿಸಿ) ಹಾಗೂ ನಾರಾಯಣಪುರ ಬಲದಂಡೆ ಕಾಲುವೆ (ಎನ್ಆರ್‌ ಬಿಸಿ) ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ರೈತರನ್ನು ಕಂಗೆಡಿಸಿದೆ. ಕಾಲುವೆಗಳಿಗೆ ಸಮರ್ಪಕವಾಗಿ ಹಾಗೂ ನಿರಂತರವಾಗಿ ನೀರು ಹರಿಸಬೇಕು. ಇಲ್ಲವಾ ದಲ್ಲಿ ಬೆಳೆದು ನಿಂತಿರುವ ಭತ್ತ, ಸಜ್ಜೆ, ಶೇಂಗಾ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಒಣಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬ ಆತಂಕ ರೈತರದ್ದಾಗಿದೆ.

ನೀರಿನ ಪೂರೈಕೆ ಮುಂದುವರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ, ರಸ್ತೆ ತಡೆ ಸೇರಿದಂತೆ ವಿವಿಧ ಹೋರಾಟದ ಹಾದಿ ಹಿಡಿದಿದ್ದಾರೆ. ಜಮೀನುಗಳಿಗೆ ನೀರಿ ಲ್ಲದೆ ಬೆಳೆಗಳು ಒಣಗುವ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಅನ್ನದಾತರು ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲು ಬೀದಿಗಿಳಿಯುವಂತಾಗಿದೆ. ಎನ್‌ಆರ್‌ಬಿಸಿ ನೀರಿಗಾಗಿ ಲಿಂಗಸುಗೂರು, ದೇವದುರ್ಗ ತಾಲೂಕುಗಳ ರೈತರು, ಟಿಎಲ್‌ಬಿಸಿ ನೀರಿಗಾಗಿ ಸಿಂಧನೂರು, ಮಸ್ಕಿ, ಸಿರವಾರ ಮತ್ತು ಮಾನ್ವಿ ತಾಲೂಕಿನ ಅಚ್ಚುಕಟ್ಟು ಪ್ರದೇಶದ ಅನ್ನದಾತರು ಬೀದಿಗಿಳಿದಿದ್ದು, ರೈತರ ಹೋರಾಟಕ್ಕೆ ದೇವದುರ್ಗ ಜೆಡಿಎಸ್‌ ಶಾಸಕಿ ಕರೆಮ್ಮ ಜಿ.ನಾಯಕ ಅವರೇ ನೇತೃತ್ವ ವಹಿಸಿ ರೈತರಿಗೆ ನೀರು ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕುಡಿಯುವ ನೀರಿಗೂ ಎದುರಾಗುತ್ತಿದೆ ಸಮಸ್ಯೆ: ಕೃಷಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದ ಬರದ ಬಿಸಿ ಇದೀಗ ಗ್ರಾಮೀಣ ಜನರ ಬದುಕಿಗೂ ತಟ್ಟಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದು, ಜನರು ನೀರಿಗಾಗಿ ಪರದಾಡುವಂತಾಗಿದೆ. ಕೆಲವು ಗ್ರಾಮಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗದೆ ಸಾರ್ವಜನಿಕರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಿಲ್ಲೆ ಲಿಂಗಸುಗೂರು ತಾಲೂಕಿನ ಮಟ್ಟೂರು ತಾಂಡಾದಲ್ಲಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಯಲ್ಲಿ ಊಟದ ಬುತ್ತಿ ಬಿಚ್ಚಿ ಪ್ರತಿಭಟನೆ ನಡೆಸಿರುವುದು ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮಾನ್ವಿ ತಾಲೂಕಿನ ನಂದಿಹಾಳ, ನಕ್ಕುಂದಿ, ನಸ್ಲಾಪುರ, ಜಾನೇಕಲ್ ಹಾಗೂ ಅಮರಾವತಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ಮಸ್ಕಿ ತಾಲೂಕಿನ ಪಾಮನಕಲ್ಲೂರು ಇತರೆ ಪ್ರಾಂತಗಳಲ್ಲಿ ನೀರಿಗಾಗಿ ಜನರು ಪರದಾಡುವಂತಹ ಸನ್ನಿವೇಶಗಳು ಹೆಚ್ಚಾಗುತ್ತಿವೆ.

ಆಡಳಿತದ ವಿರುದ್ಧ ಆಕ್ರೋಶ: ಬರದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ತುರ್ತಾಗಿ ಪರಿಹಾರ ಕಲ್ಪಿಸಬೇಕಾದ ಆಡಳಿತ ವ್ಯವಸ್ಥೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು, ಬತ್ತಿಹೋಗಿರುವ ಕೊಳವೆ ಬಾವಿಗಳ ಬದಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಜಿಲ್ಲೆಯ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎರಡೂ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ರೈತರ ಬೆಳೆಗಳಿಗೆ ನೀರು, ಜನರಿಗೆ ಕುಡಿಯುವ ನೀರು ಒದಗಿಸುವುದು ಜಿಲ್ಲಾಡಳಿತದ ಮುಂದಿರುವ ತಕ್ಷಣದ ಸವಾಲಾಗಿದೆ. ಬರದ ಸಂಕಷ್ಟ ಮತ್ತಷ್ಟು ಉಲ್ಬಣಗೊಳ್ಳುವ ಮುನ್ನ ಸರ್ಕಾರ ಹಾಗೂ ಜಿಲ್ಲಾಡಳಿತ ಸಮಗ್ರ ಕಾರ್ಯಯೋಜನೆ ರೂಪಿಸಿ ಪರಿಹಾರ ಕಲ್ಪಿಸಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ