ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ- ಬಸವರಾಜ ಬೊಮ್ಮಾಯಿ ಆರೋಪ

KannadaprabhaNewsNetwork |  
Published : Sep 08, 2026, 02:30 AM IST
7ಎಚ್‌ವಿಆರ್‌5 | Kannada Prabha

ಸಾರಾಂಶ

ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ತನ್ನ ವಾದವನ್ನು ಸರಿಯಾಗಿ ಮಂಡಿಸಲು ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿ: ​ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಎಡವಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ತನ್ನ ವಾದವನ್ನು ಸರಿಯಾಗಿ ಮಂಡಿಸಲು ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸೋಮವಾರ ​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ತನಗೆ ಲಭ್ಯವಿರುವ ನೀರು, ಮಳೆಯ ಪ್ರಮಾಣ ಮತ್ತು ನೀರಿನ ಸಂಗ್ರಹಣೆಯ ಬರಿ ಅಂಕಿ-ಅಂಶಗಳನ್ನು ಮಂಡಿಸುತ್ತಿದೆಯೇ ಹೊರತು, ಕಾವೇರಿ ನೀರನ್ನು ಕುಡಿಯುವ ನೀರಿಗಾಗಿ ಸಂಗ್ರಹಿಸಲಾಗುತ್ತಿದೆಯೇ ಅಥವಾ ಕೃಷಿಗಾಗಿ ಬಳಸಲಾಗುತ್ತಿದೆಯೇ ಎಂಬುದನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸೋತಿದೆ ಎಂದರು.

​ತಮಿಳುನಾಡಿಗೆ ಅನುಕೂಲ: ತಮಿಳುನಾಡಿನಲ್ಲಿ ಮೂರು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಮಳೆ ಕಡಿಮೆಯಾದ ಸಂದರ್ಭದಲ್ಲೂ ಕೃಷಿಗೆ ಅಪಾರ ಪ್ರಮಾಣದ ನೀರನ್ನು ಬಳಸಲಾಗುತ್ತಿದೆ. ಕೇವಲ ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶಗಳಲ್ಲೇ ಸುಮಾರು 40 ಟಿ.ಎಂ.ಸಿ ನೀರನ್ನು ಬಳಸಿರುವುದು ಸ್ಪಷ್ಟವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ರೈತರಿಗೆ ಒಂದು ಬೆಳೆಯನ್ನು ಬೆಳೆಯಲು ಕೂಡ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕುಡಿಯುವ ನೀರಿನ ಅಭಾವ: ಮಂಡ್ಯ, ಮೈಸೂರು ಭಾಗದ ರೈತರ ಕೃಷಿ ಜಮೀನುಗಳಿಗೆ ನೀರಿಲ್ಲದೆ ತೊಂದರೆಯಾಗಿದೆ. ಇಷ್ಟೇ ಅಲ್ಲದೆ, ಮುಂದಿನ ಬೇಸಿಗೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಲಿದೆ. ಸರ್ಕಾರ ಅಧಿಕಾರಿಗಳ ಮೇಲಷ್ಟೇ ಅವಲಂಬಿತವಾಗದೆ, ಕಾವೇರಿ ನೀರಿನ ವಿಚಾರದಲ್ಲಿ ಜ್ಞಾನ ಮತ್ತು ಅನುಭವ ಹೊಂದಿರುವ ಹಿರಿಯ ತಜ್ಞರು ಹಾಗೂ ಕಾನೂನು ಪಂಡಿತರನ್ನು ಒಳಗೊಂಡು ಪರಿಣಾಮಕಾರಿಯಾಗಿ ವಾದ ಮಂಡಿಸಬೇಕಿತ್ತು. ಪ್ರಸ್ತುತ ಪ್ರಾಧಿಕಾರವು ಪರಿಶೀಲನೆಗೆ ಆಗಮಿಸುತ್ತಿದ್ದು, ಈಗಲಾದರೂ ಸರ್ಕಾರ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ​ರಾಜ್ಯದ ಹಿತಾಸಕ್ತಿಯನ್ನು ಬಲಿಗೊಟ್ಟು ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿದ ಅವರು, ಸರ್ಕಾರ ತಕ್ಷಣವೇ ಗಂಭೀರ ಕ್ರಮಗಳನ್ನು ಕೈಗೊಂಡು ರಾಜ್ಯದ ಪಾಲಿನ ನೀರನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದರು.

​ಬರ ಘೋಷಣೆಯಲ್ಲಿ ವಿಳಂಬ: ಹಾವೇರಿ ಜಿಲ್ಲಾದ್ಯಂತ ತೀವ್ರ ಬರಗಾಲವಿದ್ದರೂ ಸರ್ಕಾರ ಕೇವಲ ಸ್ಯಾಟಲೈಟ್ ಇಮೇಜ್‌ಗಳನ್ನು ಮುಂದಿಟ್ಟುಕೊಂಡು ಬರ ಘೋಷಣೆ ಮಾಡಲು ವಿಳಂಬ ಮಾಡುತ್ತಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆ ಕೊರತೆಯಿಂದಾಗಿ ಬಿತ್ತನೆಯಾದ ಬೆಳೆಗಳು ಸಂಪೂರ್ಣವಾಗಿ ಒಣಗಿಹೋಗಿವೆ. ಅಲ್ಲದೆ, ಆರಂಭದಲ್ಲಿ ಮಳೆಯಾಗಿ ಸ್ವಲ್ಪ ಬೆಳೆದಿದ್ದ ಬೆಳೆಗಳೂ ಸಹ ಈಗ ನೀರಿನ ಕೊರತೆಯಿಂದ ನಷ್ಟವಾಗಿವೆ. ಜಿಲ್ಲೆಯಲ್ಲಿ ಕೈಗೊಂಡಿದ್ದ ಏತ ನೀರಾವರಿ ಯೋಜನೆಗಳು ಯಾವುದೇ ಕೆಲಸ ಮಾಡುತ್ತಿಲ್ಲ. ವಿದ್ಯುತ್ ಬಿಲ್ ಸರಿಯಾಗಿ ಪಾವತಿಯಾಗದೆ ಮತ್ತು ಕೆರೆಗಳನ್ನು ತುಂಬಿಸಲು ಅವಕಾಶವಿದ್ದರೂ ನದಿಗಳಲ್ಲಿ ನೀರು ಕಡಿಮೆಯಾಗಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ಬರೀ ಬಾಯಿಮಾತಿನಲ್ಲಿ ಭೇಟಿ ನೀಡುತ್ತಿದ್ದಾರೆ ವಿನಃ ಯಾವುದೇ ಪರಿಹಾರಾತ್ಮಕ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌ ಅನುದಾನವಿದ್ದರೂ ಅದನ್ನು ಬಿಡುಗಡೆ ಮಾಡದೆ ಸರ್ಕಾರ ತನ್ನ ಖಜಾನೆ ಖಾಲಿಯಾಗಿರುವುದನ್ನು ಮುಚ್ಚಿಹಾಕಲು ಬರ ಘೋಷಣೆಯನ್ನು ವಿಳಂಬ ಮಾಡುತ್ತಿದೆ. ಸರ್ಕಾರ ಕೂಡಲೇ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಕುಡಿಯುವ ನೀರು ಮತ್ತು ಗೋಕುಲಗಳಿಗೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ತುರ್ತು ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ
ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ನಿಂದ ಅಕ್ರಮ ನೀರು ಬಳಕೆ!