ಕೆರೆ ತುಂಬಿಸುವ ಯೋಜನೆಗೆ ಅಳವಡಿಸಿರುವ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದ ಪ್ರಕರಣ ಗಂಗಾವತಿಯಲ್ಲಿ ಬೆಳಕಿಗೆ ಬಂದಿದ್ದು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಳವಡಿಸಿದ್ದ ಪೈಪ್‌ಗಳನ್ನು ಕಿತ್ತೆಸೆದು ಎಚ್ಚರಿಕೆ ನೀಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಗಂಗಾವತಿ: ಕೆರೆ ತುಂಬಿಸುವ ಯೋಜನೆಗೆ ಅಳವಡಿಸಿರುವ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಳವಡಿಸಿದ್ದ ಪೈಪ್‌ಗಳನ್ನು ಕಿತ್ತೆಸೆದು ಎಚ್ಚರಿಕೆ ನೀಡಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ತುಂಗಭದ್ರಾ ಎಡದಂಡೆ ಕಾಲುವೆಯ ಮೈಲ್‌ ನಂ. 22ರ ಸಮೀಪದ ದೇವಘಾಟ್‌ನಲ್ಲಿ ತುಂಗಭದ್ರಾ ನದಿಯಿಂದ ಮುಕ್ಕುಂಪ ಕೆರೆಗೆ ನೀರು ತುಂಬಿಸುವ ಯೋಜನೆಯ ಪೈಪ್‌ಲೈನ್ ಹಾದು ಹೋಗಿದೆ. ಈ ಪೈಪ್‌ಲೈನ್‌ನ ಏರ್‌ವಾಲ್ವ್‌ ಬಳಿ ಅಕ್ರಮವಾಗಿ ಪೈಪ್‌ ಜೋಡಣೆ ಮಾಡಿಕೊಂಡು ಸಮೀಪದ ಜಮೀನಿಗೆ ನೀರು ಹರಿಸಿಕೊಳ್ಳಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಸಂಪರ್ಕ ತೆರವುಗೊಳಿಸಿದ್ದಾರೆ.

ದೇವಘಾಟ್‌ನ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಮುಕ್ಕುಂಪ, ಹಿರೇಬೆಣಕಲ್, ಲಿಂಗದಳ್ಳಿ, ಚಿಕ್ಕಬೆಣಕಲ್ ಹಾಗೂ ವೆಂಕಟಗಿರಿ ಗ್ರಾಮಗಳ ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯಿಂದ ಗ್ರಾಮಗಳ ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಸಮಸ್ಯೆ ನೀಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ಯೋಜನೆಯ ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ನೀರು ಬಳಸುತ್ತಿರುವುದರಿಂದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರದಿಂದ ಕಾರ್ಯಾಚರಣೆ: ತುಂಗಭದ್ರ ಎಡದಂಡೆ ಕಾಲುವೆ ಹಾಗೂ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್‌ನಿಂದ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವವರ ವಿರುದ್ಧ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವರೆಗೆ 40ಕ್ಕೂ ಹೆಚ್ಚು ಅಕ್ರಮ ಪೈಪ್‌ಗಳನ್ನು ಕಿತ್ತೆಸೆದು ತೆರವುಗೊಳಿಸಿದ್ದಾರೆ.

ಕಾಲುವೆಯ ಅಚ್ಚುಕಟ್ಟು ಪ್ರದೇಶದ ದಾಸನಾಳ, ಕೇಸರಹಟ್ಟಿ, ಚಿಕ್ಕಡಂಕನಕಲ್, ಮೈಲಾಪುರ, ಕಾರಟಗಿ ಸೇರಿದಂತೆ ವಿವಿಧೆಡೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಲಭಿಸಿದೆ. ಕೆಲವು ಪ್ರಭಾವಿ ರೈತರೂ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ.

ದೂರು ನೀಡಿದ್ದಕ್ಕೆ ರೈತರ ಆಕ್ರೋಶ: ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಕುರಿತು ಬಸಾಪಟ್ಟಣದ ವ್ಯಕ್ತಿಯೊಬ್ಬರು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವು ರೈತರು ಹಾಗೂ ದೂರುದಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಈಗಾಗಲೇ ಭತ್ತ ನಾಟಿ ಮಾಡಿಕೊಂಡು ನೀರು ಹಾಯಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ದೂರು ನೀಡಿ ಅಧಿಕಾರಿಗಳನ್ನು ಕರೆಸಿರುವುದರಿಂದ ರೈತರಿಗೆ ಕಿರುಕುಳವಾಗುತ್ತಿದೆ ಎಂದು ಕೆಲವು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಾಗ್ಯುದ್ಧ ನಡೆಯಿತು.

ಅಧಿಕಾರಿಗಳ ಭೇಟಿ, ಎಚ್ಚರಿಕೆ: ಸ್ಥಳಕ್ಕೆ ಜಲ ಸಂಪನ್ಮೂಲ ಇಲಾಖೆಯ ವಡ್ಡರಹಟ್ಟಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ಹಾಗೂ ಅಗಳಕೇರಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಅಮರೇಶ ಕಂಪ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ರಮವಾಗಿ ನೀರು ಬಳಕೆ ಮಾಡದಂತೆ ರೈತರಿಗೆ ಎಚ್ಚರಿಕೆ ನೀಡಿದ್ದು, ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಿದರು.

ಕೆರೆ ತುಂಬಿಸುವ ಯೋಜನೆಯ ಉದ್ದೇಶ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದಾಗಿದ್ದು, ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡು ನೀರು ಬಳಸುವುದರಿಂದ ಯೋಜನೆಯ ಮೂಲ ಉದ್ದೇಶವೇ ಹಾಳಾಗಲಿದೆ. ಹೀಗಾಗಿ ಅಕ್ರಮ ನೀರು ಬಳಕೆ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.