ಎಲ್ಲರೂ ನಾನು ಮಂತ್ರಿಯಾಗಲಿ ಎಂದು ಬಯಸಿದ್ದರು. ಆದರೆ, ಮಂತ್ರಿಗಳಿಗಿಂತ ದೊಡ್ಡ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ.

ಸವಣೂರು: ಎಲ್ಲರೂ ನಾನು ಮಂತ್ರಿಯಾಗಲಿ ಎಂದು ಬಯಸಿದ್ದರು. ಆದರೆ, ಮಂತ್ರಿಗಳಿಗಿಂತ ದೊಡ್ಡ ಸ್ಥಾನದಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ.

ಸಂವಿಧಾನದ ನಿಯಮಾವಳಿಗಳಿಗೆ ಬದ್ಧರಾಗಿ, ನಿಷ್ಪಕ್ಷಪಾತವಾಗಿ ಸದನ ನಡೆಸಿ ರಾಜ್ಯದ ಹಿತ ಕಾಯಲು ಶ್ರಮಿಸುತ್ತೇನೆ ಎಂದು ನೂತನ ಸಭಾಪತಿ ಸಲೀಂ ಅಹ್ಮದ್ ಅವರು ಹೇಳಿದರು.

ಪಟ್ಟಣದ ದೊಡ್ಡಹುಣಸೇ ಕಲ್ಮಠದಲ್ಲಿ ನಾಡಿನ ವಿವಿಧ ಮಠಾಧೀಶರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಭಾಪತಿ ಪೀಠಕ್ಕೆ ಯಾವುದೇ ಜಾತಿ, ಜನಾಂಗ ಹಾಗೂ ಧರ್ಮದ ಹಂಗಿಲ್ಲ. ನಾನು ಅಲಂಕರಿಸಿರುವುದು ಅಧಿಕಾರದ ಹುದ್ದೆಯಲ್ಲ, ನ್ಯಾಯ ಪ್ರತಿಷ್ಠಾಪಿಸುವ ಜವಾಬ್ದಾರಿ ಹುದ್ದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ನನ್ನ ಕರ್ತವ್ಯ ಎಂದರು.ಸದನದಲ್ಲಿ ಗದ್ದಲಕ್ಕಿಂತ ಚರ್ಚೆಗೆ, ಆರೋಪಕ್ಕಿಂತ ಉತ್ತರಕ್ಕೆ, ರಾಜಕೀಯ ಕೆಸರೆರಚಾಟಕ್ಕಿಂತ ಜನಹಿತಕ್ಕೆ ಆದ್ಯತೆ ನೀಡುತ್ತೇನೆ. ಜನರ ಸಮಸ್ಯೆಗಳ ಚರ್ಚೆಗೆ ಅವಕಾಶ ಕಲ್ಪಿಸುವ ಮತ್ತು ಪರಿಹಾರ ಒದಗಿಸುವ ಜನಪರ ವೇದಿಕೆಯಾಗಿ ವಿಧಾನ ಪರಿಷತ್ತನ್ನು ರೂಪಿಸುವುದು ನನ್ನ ಸಂಕಲ್ಪ ಎಂದರು.

ಕಳೆದ 45 ವರ್ಷಗಳಿಂದ ವಿದ್ಯಾರ್ಥಿ ನಾಯಕನಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಸಭಾಪತಿಯಾಗಿ ಆಯ್ಕೆಯಾದ ತಕ್ಷಣವೇ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಸಭಾಪತಿ ಪೀಠದಲ್ಲಿದ್ದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ಕಂಡು ಸದನವನ್ನು ನಡೆಸುವುದು ನನ್ನ ಮುಖ್ಯ ಕರ್ತವ್ಯವಾಗಿದೆ ಎಂದರು.ಜನಸಮಸ್ಯೆಗಳ ಚರ್ಚೆಗೆ ಆದ್ಯತೆ..

ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲ, ಕುಡಿಯುವ ನೀರಿನ ಅಭಾವ, ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳ ಕುರಿತು ಸದನದಲ್ಲಿ ಸುದೀರ್ಘ ಚರ್ಚೆಯಾಗಬೇಕಿದೆ. ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಕಲಾಪಗಳು ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷದ ನಾಯಕರಿಗೂ ಮನವಿ ಮಾಡಿದ್ದರೂ ಸಹ ಕಳೆದ ಅಧಿವೇಶನದಲ್ಲಿ ಗದ್ದಲದಿಂದಾಗಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿಲ್ಲ, ಚರ್ಚೆ ಮಾಡದೇ ವಿಧೇಯಕ ಅಂಗೀಕಾರ ಆಗಿರೋದು ನೋವಿನ ಸಂಗತಿ ಎಂದರು.ಈ ಸಂದರ್ಭದಲ್ಲಿ ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ತಿಳುವಳ್ಳಿಯ ಬಸವಲಿಂಗ ಸ್ವಾಮೀಜಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಫೀರ್ ಖಾದ್ರಿ, ಶಾಸಕ ಯಾಸೀರಖಾನ್ ಪಠಾಣ, ಕಾಂಗ್ರೆಸ್ ಮಾಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಸಂತಾ ಬಾಗೂರ ಇತರರು ಇದ್ದರು.

ಸವಣೂರಿನ ಈ ಪವಿತ್ರ ನೆಲದಲ್ಲಿ ದೊಡ್ಡಹುಣಸೇ ಕಲ್ಮಠದ ಸಾನ್ನಿಧ್ಯದಲ್ಲಿ ನಿಮ್ಮೆಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗುತ್ತಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ಈ ಮಠ ಕೇವಲ ಧಾರ್ಮಿಕ ಕ್ಷೇತ್ರವಲ್ಲ. ಇದು ಸಮಾನತೆಯ ಸಂದೇಶದ ತಾಣ, ಮಾನವೀಯತೆಯ ನೆಲೆ, ಸೌಹಾರ್ದತೆಯ ದಾರಿದೀಪ ಹಾಗೂ ಸಮಾಜಸೇವೆಯ ಪ್ರೇರಣಾ ಕೇಂದ್ರವಾಗಿದೆ ಎಂದು ಸಭಾಪತಿ ಸಲೀಂ ಅಹ್ಮದ್ ಹೇಳಿದರು.

ಅಧಿಕಾರ ಇರಲಿ, ಬಿಡಲಿ ಸಲೀಂ ಅಹ್ಮದ್ ಅವರ ಮುಖದಲ್ಲಿ ಕಮಲದಂತಹ ನಗು ಇದ್ದೇ ಇರುತ್ತೆ. ನಮಗೆಲ್ಲಾ ಇವರು ಮಂತ್ರಿ ಆಗ್ತಾರೆ ಎಂಬ ಆಸೆ ಇತ್ತು. ಆದರೆ, ಮಂತ್ರಿಗಳ ಮೇಲೆ ಇವರನ್ನು ಕೂರಿಸಿದ್ದಾರೆ. ಸಭಾಪತಿಯಾಗಿ ಸದನವನ್ನು ಹೇಗೆ ನಡೆಸುತ್ತಾರೆ ಎಂಬ ಕುತೂಹಲ ಇತ್ತು. ಕಳೆದ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಸಲೀಂ ಅಹ್ಮದ್ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಭಾವೈಕ್ಯತೆಯ ನಾಯಕ ಎಂದೇ ಖ್ಯಾತರಾದ ಸಲೀಂ ಅಹ್ಮದ್ ಅವರು ನಮ್ಮ ಮಠಕ್ಕೆ ಭೇಟಿ ಕೊಟ್ಟಿರುವುದು ಸಂತಸ ತಂದಿದೆ. ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಸದನದ ಮೂಲಕ ಜನರಿಗೆ ನ್ಯಾಯ ಕಲ್ಪಿಸಲಿ ಎಂದು ದೊಡ್ಡಹುಣಸೇ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.

ಅದ್ಧೂರಿ ಸ್ವಾಗತ

ವಿಧಾನಪರಿಷತ್‌ನ ಸಭಾಪತಿಯಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಲೀಂ ಅಹ್ಮದ್ ಅವರನ್ನು ಸವಣೂರಿನಲ್ಲಿ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರು ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬಳಿಕ ಸವಣೂರಿನ ದೊಡ್ಡಹುಣಸೆ ಮಠಕ್ಕೆ ಭೇಟಿ ನೀಡಿದ ಅವರನ್ನು ಮಠದ ಭಕ್ತರು ಪುಷ್ಪವೃಷ್ಟಿಗೈದು ಸ್ವಾಗತಿಸಿದರು.