ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸೋಮವಾರ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಹಾಗೂ ಸಂವಿಧಾನದ 371(ಜೆ) ಕಲಂ ಸಮರ್ಪಕ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸೋಮವಾರ ನಗರದ ಅಶೋಕ ವೃತ್ತದಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. 371(ಜೆ) ಅನುಷ್ಠಾನಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಕೆಕೆಆರ್‌ಡಿಬಿ ಅನುದಾನ ಬಳಕೆಗೆ ಮುಂದಿನ 10 ವರ್ಷಗಳ ಕ್ರಿಯಾ ಯೋಜನೆ ರೂಪಿಸಬೇಕು. ಕೃಷ್ಣಾ ಕೊಳ್ಳದ ಕರ್ನಾಟಕ ಪಾಲಿನ 700 ಟಿಎಂಸಿ ನೀರಿನ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಕೈಗೊಂಡು ಮೂಲಸೌಕರ್ಯ ಕಲ್ಪಿಸಬೇಕು. ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ಯೋಜನೆ ರೂಪಿಸಿ ಉದ್ಯೋಗಾವಕಾಶ ಸೃಷ್ಟಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೈಗಾರಿಕಾ ಚಟುವಟಿಕೆಗೆ ಉತ್ತೇಜನ ನೀಡಲು ವಿಶೇಷ ಯೋಜನೆ ಘೋಷಿಸಬೇಕು ಎಂದು ಒತ್ತಾಯಿಸಲಾಯಿತು.

ಕೊಪ್ಪಳ ನಗರಕ್ಕೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಬಲ್ಡೋಟ್ ಕಾರ್ಖಾನೆಯ ಅನುಮತಿ ರದ್ದುಪಡಿಸಬೇಕು. ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆಗೆ ಅನುಮತಿ ನೀಡಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಧರಣಿ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿದ ಮಾಜಿ ಶಾಸಕ ಮಹಿಮ ಪಟೇಲ್, ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಇಲ್ಲಿನ ಜನರ ಬೇಡಿಕೆಗಳಿಗೆ ಅನುಗುಣವಾಗಿ ಸರ್ಕಾರ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, 371(ಜೆ) ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಉದ್ಯೋಗ, ಬಡ್ತಿ ಹಾಗೂ ನೇಮಕಾತಿ ಸಂದರ್ಭಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು ಎಂದರು.

ವಕೀಲರ ಸಂಘದ ರಾಜ್ಯ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರು ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ 371(ಜೆ) ಜಾರಿಯಾಗಿ 13 ವರ್ಷ ಕಳೆದರೂ ಯುವಕರ ಬೇಡಿಕೆಗಳು ಈಡೇರಿಲ್ಲ. ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ನಿರಂತರವಾಗಿ ಈ ಭಾಗದ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದರು.

ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತಿವರ್ಷ ಕನಿಷ್ಠ ₹5 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸೆ. 17ರಂದು ಕಲಬುರಗಿಯಲ್ಲಿ ಪ್ರತಿಭಟನೆ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಸೆ. 17ರಂದು ಕಲಬುರಗಿಯಲ್ಲಿ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿರುವ ಹಿನ್ನೆಲೆಯಲ್ಲಿ, 371(ಜೆ) ಸಮರ್ಪಕ ಅನುಷ್ಠಾನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಯಲ್ಲಿ ಕೊಪ್ಪಳ ಜಿಲ್ಲೆಯಿಂದ 500ಕ್ಕೂ ಅಧಿಕ ಮಂದಿ ಭಾಗವಹಿಸಲು ನಿರ್ಧರಿಸಲಾಯಿತು.

ಹೋರಾಟ ಸಮಿತಿಯ ಹಿರಿಯ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿಗಳಾದ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ್, ರವಿ ಕಾಂತನವರ್, ಜಿಲ್ಲಾ ಅಧ್ಯಕ್ಷ ಸಂತೋಷ ದೇಶಪಾಂಡೆ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರು, ರಮೇಶ ತುಪ್ಪದ, ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಗೋಂಡಬಾಳ, ಹುಲಗಪ್ಪ ಕಟ್ಟಿಮನಿ, ಬಸವರಾಜ ಸಂಕನಗೌಡ್ರ, ಸೋಮನಗೌಡ ಹೊಗರನಾಳ, ಮಂಜುನಾಥ ಅಂಗಡಿ, ಆನಂದ ಹಳ್ಳಿಗುಡಿ, ಹನುಮೇಶ ಕಲ್ಮಂಗಿ, ರಾಜೇಶ ಸಸಿಮಠ ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೋಂಡಬಾಳ, ಆಶೋಕ ಕುಂಬಾರ, ಶುಕ್ರುಸಾಬ್ ನದಾಫ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ. ಕಣವಿ, ಪಿ.ವಿ. ಪರತಗೌಡ್ರ, ನವೋದಯ ವಿರೂಪಾಕ್ಷಪ್ಪ, ಗವಿಸಿದ್ದಪ್ಪ ಹಂಡಿ, ಬಸವರಾಜ ಮೇಲಸಕ್ರಿ, ಮಂಜುನಾಥ ಮಸ್ಕಿ, ಶಂಕರ ಸಿಂಗ್ರಿ, ಕಾಶಪ್ಪ ಚಲುವಾದಿ, ಶಿವಪ್ಪ ಚಲುವಾದಿ ಭಾಗವಹಿಸಿದ್ದರು.