ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿತೀರದಲ್ಲಿ ಸೆ. 8ರಂದು ಸಂಜೆ 6.30ಕ್ಕೆ ತುಂಗಭದ್ರಾ ಆರತಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ನದಿಯಲ್ಲಿ ನೀರು ಇಲ್ಲದಿರುವುದರಿಂದ ತುಂಗಾರತಿ ಕಾರ್ಯಕ್ರಮದ ವೇಳೆ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ.

ಕೊಪ್ಪಳ: ಬರದಲ್ಲಿಯೂ ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿತೀರದಲ್ಲಿ ಸೆ. 8ರಂದು ಸಂಜೆ 6.30ಕ್ಕೆ ತುಂಗಭದ್ರಾ ಆರತಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ಬರ ಇರುವುದರಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿಲ್ಲ. ಹೀಗಾಗಿ ನದಿಯಲ್ಲಿ ನೀರು ಸಹ ಅಷ್ಟಾಗಿ ಇಲ್ಲ. ಇದರಿಂದ ತುಂಗಾರತಿಯ ಉತ್ಸಾಹಕ್ಕೆ ಕೊಂಚ ಹಿನ್ನಡೆಯಾಗಿದೆ.

ಕಳೆದ ವರ್ಷ ಹುಲಿಗೆಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭಿಸಲಾಗಿರುವ ತುಂಗಾರತಿ ಈ ವರ್ಷವೂ ನಡೆಯಲಿದೆ. ಕಳೆದ ವರ್ಷ ತುಂಗಭದ್ರಾ ನದಿಯಲ್ಲಿ ಹರಿಯುತ್ತಿದ್ದ ಭಾರಿ ಪ್ರಮಾಣದ ನೀರು ತುಂಗಾರತಿ ಮೆರುಗು ಹೆಚ್ಚಿಸಿತ್ತು. ಸಂಪ್ರದಾಯ ಬಿಡಬಾರದು ಎಂದು ಈ ವರ್ಷವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನದಿಯಲ್ಲಿ ನೀರು ಇಲ್ಲದಿರುವುದರಿಂದ ತುಂಗಾರತಿ ಕಾರ್ಯಕ್ರಮದ ವೇಳೆ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ.

ಹಚ್ಚದಿರಲಿ ಪಟಾಕಿ: ತುಂಗಭದ್ರಾ ನದಿಯಲ್ಲಿ ಅನೇಕ ಜಲಚರಗಳಿವೆ, ವಿಶೇಷವಾಗಿ ಅಳಿವಿನಂಚಿನಲ್ಲಿರುವ ನೀರುನಾಯಿಗಳಿವೆ. ಈ ನದಿಯನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಗಿದೆ. ಕಳೆದ ವರ್ಷ ನದಿಯಲ್ಲಿರುವ ಕಲ್ಲು ಬಂಡೆಗಳ ಮೇಲೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದು, ತೀವ್ರ ಟೀಕೆಗೆ ಗುರಿಯಾಗಿತ್ತು. ಈ ವರ್ಷವಾದರೂ ಜಿಲ್ಲಾಡಳಿತ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಅಭಿವೃದ್ಧಿ ಕಾರ್ಯಕ್ಕೆ ಅಡಿಗಲ್ಲು: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಬಸವಂತಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಆಗಮಿಸಲಿದ್ದಾರೆ. ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕೆ. ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ತುಂಗಭದ್ರಾ ನದಿಗೆ ಶ್ರೀ ಹುಲಿಗೆಮ್ಮ ದೇವಿ ಸನ್ನಿಧಾನದಲ್ಲಿ ತುಂಗಾರತಿ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಕುಂಭೋತ್ಸವ, ಸಂಜೆ ನದಿಯ ದಡದಲ್ಲಿ ತುಂಗಾರತಿ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್ ಹೇಳಿದರು.