ಮಾಗಡಿ: ತಾಲೂಕಿನ ಚಕ್ರಬಾವಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಚಕ್ರಬಾವಿಯ ಸೀಮೆಎಣ್ಣೆ ರಾಜಣ್ಣ ಉಪಾಧ್ಯಕ್ಷರಾಗಿ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳಿಕ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿದ್ದು, ಪ್ರತಿ ರೈತರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಸರ್ಕಾರಿ ಸೌಲಭ್ಯಗಳು ತಲುಪುವಂತೆ ಮಾಡುವುದು ನಮ್ಮ ಮೊದಲ ಆದ್ಯತೆ. ಅತಿ ಶೀಘ್ರದಲ್ಲೇ ಜನತಾ ಬಜಾರ್ ಆರಂಭಿಸಿ ಈ ಭಾಗದ ಜನರಿಗೆ ಕಡಿಮೆ ದರದಲ್ಲಿ ಎಲ್ಲಾ ವಸ್ತುಗಳು ಕೈಗೆಟಿಕಿಸುವುದು ನಮ್ಮ ಕರ್ತವ್ಯ. ಅದಕ್ಕೆ ಅಧ್ಯಕ್ಷ-ಉಪಾಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು.
ಮಾಜಿ ಶಾಸಕರ ವಿರುದ್ಧ ವಾಗ್ದಾಳಿ: ಮಾಜಿ ಶಾಸಕ ಎ.ಮಂಜುನಾಥ್ ಹಿಟ್ಟನ್ ರನ್ ಗಿರಾಕಿ. ಶಾಸಕ ಬಾಲಕೃಷ್ಣ ಕೋಟಿಗಟ್ಟಲೆ ಹಣ ದುರುಪಯೋಗ ಮಾಡಿದ್ದಾರೆ ಎಂದು ದಾಖಲೆ ಇಲ್ಲದೆ ಆರೋಪಿಸುತ್ತಾರೆ. ಸಹಕಾರ ಕ್ಷೇತ್ರದ ಅರಿವಿಲ್ಲದ ಅವರು ಪಾರದರ್ಶಕವಾಗಿ ಚಕ್ರಬಾವಿ ಸೊಸೈಟಿ ಚುನಾವಣೆ ನಡೆದಿಲ್ಲ, ಫಲಿತಾಂಶವನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ದೂರು ನೀಡುವುದಾಗಿ ಆರೋಪಿಸಿದ್ದಾರೆ. ಚುನಾವಣೆ ವೇಳೆ ವೃದ್ಧರನ್ನು ನಮ್ಮ ಕಾರ್ಯಕರ್ತರು ಮತಗಟ್ಟೆಗೆ ಕರೆತಂದಿರುವುದು ಸತ್ಯ. ನಿಮ್ಮ ಕಾರ್ಯಕರ್ತರು ಅಲ್ಲಿಯೇ ಇದ್ದಾರೆ. ಇದನ್ನೇ ಅವ್ಯವಹಾರ ಕಳ್ಳ ಮತದಾನ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡುವುದು ಬೇಡ ಎಂದು ಹೇಳಿದರು.ಈ ವೇಳೆ ಸಂಘದ ನಿರ್ದೇಶಕರಾದ ರಾಧಮ್ಮ, ನಳಿನಾಕ್ಷಿ, ಎಸ್.ಕೆ.ಲೋಕೇಶ್ ಕುಳ್ಳಯ್ಯ, ಗಂಗಣ್ಣ, ಮಹೇಶ್, ಮಹದೇವಯ್ಯ, ಪುಟ್ಟಸ್ವಾಮಿ, ಸ್ವಾಮಿ, ಸಿಇಒ ಸಿ.ಎಚ್. ಬೈರೇಶ್, ಸಹಾಯಕ ಸಂತೋಷ್, ಮುಖಂಡರಾದ ಮಾರೇಗೌಡ, ಬಿ.ಟಿ.ವೆಂಕಟೇಶ್, ಕಾಂತರಾಜು, ರವೀಂದ್ರ, ಕುಮಾರ್, ಶ್ರೀನಿವಾಸ್, ಬಸವರಾಜು, ಪಂಚಾಕ್ಷರಿ, ರಮೇಶ್, ಶ್ರೀಧರ್, ದೇವರಾಜು, ಜಗದೀಶ್, ದೀಪಕ್, ಪಾಪೇಗೌಡ, ಮಹೇಶ್, ಮನು ಭಾಗವಹಿಸಿದ್ದರು.