ಶಿವಾನಂದ ಹುಬ್ಬಳ್ಳಿ
ಹುಬ್ಬಳ್ಳಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿರುವ ಬಜೆಟ್ ಘೋಷಣೆ ಧಾರವಾಡ ಜಿಲ್ಲೆಗೆ ಸಾಕಷ್ಟು ಇವೆ ಎನಿಸಿದರೂ ನಿರೀಕ್ಷೆಗೆ ತಕ್ಕಷ್ಟು ಸಿಕ್ಕಿಲ್ಲ ಎಂಬುದು ಸ್ಪಷ್ಟ. ಆದರೂ ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ಕೈಗಾರಿಕಾ ನೋಡ್, ಡಿಜಿಟಲ್ ಲೈಬ್ರರಿ, ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ನೀಡಿ ಸಮಾಧಾನಪಡಿಸಿದ್ದಾರೆ.ಕಳೆದ ವರ್ಷದ್ದೇ ಕೆಲವೊಂದಿಷ್ಟು ಪುನರಾವರ್ತಿತವಾಗಿದ್ದು ಕೆಲವೊಂದಿಷ್ಟು ಲೋಕಾರ್ಪಣೆಯಂಥ ವಿಷಯ ಸೇರಿಸಿರುವುದು ಸಾರ್ವಜನಿಕರಲ್ಲಿ ಬೇಸರ ಉಂಟು ಮಾಡಿದೆ.
ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ₹ 30 ಸಾವಿರ ಕೋಟಿ ಹೂಡಿಕೆ ಆಕರ್ಷಿಸುವುದರೊಂದಿಗೆ 75 ಸಾವಿರ ಉದ್ಯೋಗ ಸೃಷ್ಟಿಸಲು ಧಾರವಾಡವನ್ನು ಕೈಗಾರಿಕಾ ನೋಡ್ ಮಾಡಲಾಗುತ್ತಿದೆ. ಇದಕ್ಕಾಗಿ 1000 ಎಕರೆ ಭೂಸ್ವಾಧೀನ ಮಾಡಲು ₹ 600 ಕೋಟಿ ಅನುದಾನ. ಈ ಸಾಲಿನಲ್ಲಿ ₹ 200 ಕೋಟಿ ಮೀಸಲಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಇದೇ ಮೊದಲ ವರ್ಷ 1000 ಎಕರೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿರುವುದಕ್ಕೆ ಉದ್ಯಮಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಪರವಾಗಿ ಯೋಚಿಸಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಧಾರವಾಡದಲ್ಲಿ ಡಿಜಿಟಲ್ ಲೈಬ್ರರಿ ಮಾಡುವುದಾಗಿ ತಿಳಿಸಿದೆ. ಬೆಂಗಳೂರು ಮತ್ತು ಧಾರವಾಡದಲ್ಲಿನ ಲೈಬ್ರರಿಗೆ ₹ 10 ಕೋಟಿ ಮೀಸಲಿಟ್ಟಿದೆ. ಧಾರವಾಡದಲ್ಲಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್. ಇದು ವಿದ್ಯಾರ್ಥಿ ವಲಯದಲ್ಲಿ ಸಂತಸವನ್ನುಂಟು ಮಾಡಿದೆ.
ಇ- ಕೋರ್ಟ್:
ಹುಬ್ಬಳ್ಳಿ ಇಎಸ್‌ಐ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಆರಂಭ. ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಹುಬ್ಬಳ್ಳಿಯಲ್ಲಿ ಮತ್ಯ್ಸದರ್ಶಿನಿ ಆರಂಭ. ಇದರಿಂದ ಮತ್ಯ್ಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ₹ 2 ಕೋಟಿ ಅನುದಾನ ಪ್ರಕಟಿಸಿದೆ.
ಕಳೆದ ವರ್ಷ ಘೋಷಿಸಿದ್ದ, ಸ್ಟಾರ್ಟ್‌ಪ್‌ಗಳಿಗೆ ಉತ್ತೇಜಿಸಲು ಇನಕ್ಯುಬೇಷನ್ ಸೌಲಭ್ಯ ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್ ಆ್ಯಂಡ್ ಪ್ಲೇ ಸೌಲಭ್ಯದ ಲೀಪ್ ಲ್ಯಾಬ್ಸ್‌ನ್ನು ಹುಬ್ಬಳ್ಳಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಸ್ಥಾಪಿಸುವುದಾಗಿ ಹೇಳಿದೆ. ಆದರೆ, ಈ ಯೋಜನೆ ಕಳೆದ ವರ್ಷದ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ಅಲ್ಲಿಂದ ಈ ವರೆಗೂ ಏನೊಂದು ಕೆಲಸ ಆಗಿಲ್ಲ. ಲೋಕಾರ್ಪಣೆ:
ಕಳಸಾ-ಬಂಡೂರಿಯನ್ನು ಮತ್ತೆ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಿದೆ. ಆದರೆ, ಕೇಂದ್ರವೇ ಅನುಮತಿ ಕೊಡುತ್ತಿಲ್ಲ ಎಂದು ಟೀಕಿಸಿ, ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದಾಗಿ ರಾಜ್ಯಕ್ಕೆ ಹೊರೆಯಾಗಲಿದೆ ಎಂದಿದ್ದಾರೆ.ಕೆರೆಗೆ ನೀರು...
ಹುಬ್ಬಳ್ಳಿಯ ಕೆಂಪಗೇರಿಗೆ ನೀರು ತುಂಬಿಸುವ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಕಲಘಟಗಿ ತಾಲೂಕಿನ ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸಕರ ವಿಷಯ.ಧಾರವಾಡದ ಡಿಮ್ಹಾನ್ಸ್ ಸಹಯೋಗದೊಂದಿಗೆ ʻಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ'''''''''''''''' ಪ್ರಾರಂಭಿಸಲು ತೀರ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಎಸ್ಸಿ-ಎಸ್ಟಿ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯ. ಜತೆಗೆ ಧಾರವಾಡದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿರುವ ಸರ್ಕಾರ, ಇದಕ್ಕೆ ₹ 200 ಕೋಟಿ ಮೀಸಲಿಡುವುದಾಗಿ ತಿಳಿಸಿದೆ.