ಯಲಬುರ್ಗಾ: ನನ್ನ ಕ್ಷೇತ್ರದಲ್ಲೂ ನಿಮ್ಮ ರಾಯರಡ್ಡಿಯಷ್ಟು ನಾನ್ ಕೆಲಸ ಮಾಡಿಲ್ಲ, ಅಷ್ಟು ಅಭಿವೃದ್ಧಿ ಕೆಲಸಗಾರ ನಿಮ್ಮ ಶಾಸಕ ಬಸವರಾಜ ರಾಯರಡ್ಡಿ. ಹಿಡಿದ ಕೆಲಸ ಬಿಡದ ಛಲಗಾರ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಶಾಸಕ ರಾಯರಡ್ಡಿ ಕೆಲಸಗಾರ ಕಣಪ್ಪ. ಅಂತಹ ವ್ಯಕ್ತಿಯನ್ನು ಸದಾ ಬೆಂಬಲಿಸಬೇಕು. ನನ್ನ ಕ್ಷೇತ್ರದಲ್ಲೂ ಆತನಷ್ಟು ನಾನ್ ಕೆಲಸ ಮಾಡಿಲ್ಲ. ಅಭಿವೃದ್ಧಿಗೆ ಸದಾ ಮುಂದಿರ್ತಾನೆ. ರಾಜ್ಯ ಬಜೆಟಿನಲ್ಲೂ ಆತನ ಕೊಡುಗೆ ಬಹಳ ಇದೆ ಎಂದಿದ್ದಾರೆ.
ರಾಯರಡ್ಡಿ ಯಲಬುರ್ಗಾ ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾಗಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲಿ ಉತ್ತಮ ಸಲಹೆ ನೀಡಿದ್ದು, ಜನಸ್ನೇಹಿ ಬಜೆಟ್ ಆಗಿದೆ. ಇದಕ್ಕೆ ಅವರ ಶ್ರಮ ಅಪಾರವಾಗಿದೆ. ಅನುಭವ, ಬುದ್ಧಿವಂತಿಕೆಯಿಂದ ಯಲಬುರ್ಗಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನತೆ ನನಗೆ ಸನ್ಮಾನಿಸಿದ್ದು ಧನ್ಯವಾದ ತಿಳಿಸುತ್ತೇನೆ. ಅವರನ್ನು ಯಲಬುರ್ಗಾ ಕ್ಷೇತ್ರ ಜನರು ನಿರಂತರ ಆಶೀರ್ವದಿಸಬೇಕು ಎಂದರುಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಕ್ಷೇತ್ರದ ೨ ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಬೇವೂರಿಗೆ ನೂತನ ಪ್ರಥಮ ದರ್ಜೆ ಕಾಲೇಜು, ಜಿಸಿಟಿಸಿಗೆ ₹೨೦ ಕೋಟಿ ಅನುದಾನ, ಎರೆ ಭಾಗದ 23 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಸುಮಾರ ₹125 ಕೋಟಿ ಅನುದಾನ, ಶಿರೂರು ಪಿಯು ಕಾಲೇಜು, ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ, ಸೇರಿದಂತೆ ಕಳೆದ ಎರಡೂವರೆ ವರ್ಷದಲ್ಲಿ ಯಲಬುರ್ಗಾ- ಕುಕನೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಕ್ಷೇತ್ರಕ್ಕೆ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನು ಯಲಬುರ್ಗಾದ ಬಿಎಸ್ಸಿ ನರ್ಸಿಂಗ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಿಜಿ ಸೆಂಟರ್ ವಿದ್ಯಾರ್ಥಿಗಳು, ವಿವಿಧ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸನ್ಮಾನಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಹನುಮಂತಗೌಡ ಚೆಂಡೂರು, ಯಂಕಣ್ಣ ಯರಾಶಿ, ಶರಣಪ್ಪ ಗಾಂಜಿ, ಹಂಪಯ್ಯಸ್ವಾಮಿ ಹಿರೇಮಠ, ಮಂಜುನಾಥ ಕಡೇಮನಿ, ಡಾ. ಶಿವನಗೌಡ ದಾನರೆಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ಸಂಗಮೇಶ ಗುತ್ತಿ, ಮಂಜುನಾಥ ಕಡೆಮನಿ, ರಾಘವೇಂದ್ರ ಕಾತರಕಿ, ಸಂತೋಷ ಬಿನ್ನಾಳ, ಹೊನ್ನಪ್ಪ ಮರಡಿ, ಮಹೇಂದ್ರ ಗದಗಿನ ಹಾಗೂ ಅವಳಿ ತಾಲೂಕಿನ ಜನರು ಇದ್ದರು.