ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಚಿಂತಿಸಬೇಕು: ಸಮಾಜದಲ್ಲಿ ಇಂದಿಗೂ ಸಹ ಬಡವರು ಮತ್ತಷ್ಟು ಕಡು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬದುಕು ನಡೆಸುತ್ತಿದ್ದಾರೆ. ಆದರೆ ಬಸವಣ್ಣ ಅವರ ಆಶಯ ಈಡೇರಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು ಎಂದು ಡಾ.ಮಂತರ್ ಗೌಡ ಅವರು ಪ್ರತಿಪಾದಿಸಿದರು.12 ನೇ ಶತಮಾನದಲ್ಲಿ ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಒಟ್ಟುಗೂಡಿಸಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿದರು. ಆದರೆ ಸಮಾನತೆ ಇನ್ನೂ ತಲುಪಲಿಲ್ಲ, ಸಮಾನರಾಗಿ ಬದುಕುತ್ತಿದ್ದೇವೆ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಬಸವೇಶ್ವರರ ಪ್ರತಿಮೆ ಇದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುತ್ತೂರು ಶ್ರೀಗಳು ಹಾಗೂ ತುಮಕೂರು ಶ್ರೀಗಳನ್ನು ಆಹ್ವಾನಿಸಿ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಸವ ತತ್ವಗಳು ವಿಶಾಲತೆಯಿಂದ ಕೂಡಿದ್ದು, ಬಸವೇಶ್ವರರ ವಚನಗಳು ಎಲ್ಲರ ದಾರಿದೀಪವಾಗಿದೆ ಎಂದು ಸದಾಶಿವ ಸ್ವಾಮೀಜಿ ಅವರು ವಿವರಿಸಿದರು.
ಕುಶಾಲನಗರದಲ್ಲಿ ಬಸವ ಬಳಗದ ಜಾಗ ಇದ್ದು, "ಬಸವ ಭವನ " ನಿರ್ಮಾಣಕ್ಕೆ ಅಗತ್ಯ ಸಹಕಾರಕ್ಕೆ ಶಾಸಕರಲ್ಲಿ ಮನವಿ ಮಾಡಿದರು.
ಬಸವಣ್ಣ ಅವರು ಶ್ರೇಣೀಕೃತ ವ್ಯವಸ್ಥೆ, ಮೂಡನಂಬಿಕೆ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ್ದಾರೆ. ಜಾತಿ, ಧರ್ಮ, ಲಿಂಗಭೇದವಿಲ್ಲದೆ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಎಸ್.ಮೂರ್ತಿ ಅವರು ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ “ಬಸವ ಭವನ” ನಿರ್ಮಾಣಕ್ಕೆ ಜಿಲ್ಲಾಡಳಿತ ವತಿಯಿಂದ ಜಾಗ ಒದಗಿಸುವಂತಾಗಬೇಕು ಎಂದು ಕೋರಿದರು.
ಕುಮಾರಿ ಷಷ್ಠಿ ವಚನ ಗಾಯನ ಹಾಡಿದರು, ವಿಜಯಲಕ್ಷ್ಮಿ ಅವರು ಶರಣರ ವಚನ ವಾಚಿಸಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಶಂಭಾ ಶಿವಮೂರ್ತಿ, ತಾಲೂಕು ಘಟಕದ ಅಧ್ಯಕ್ಷರಾದ ರುದ್ರಪ್ರಸನ್ನ, ಆದಿ, ಟಿ.ಜಿ.ಪ್ರೇಮಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ.ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ, ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಇತರರು ಇದ್ದರು.