ಕನ್ನಡಪ್ರಭ ವಾರ್ತೆ ಕೆಂಗೇರಿ
ರಥೋತ್ಸವ ಮತ್ತು ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ತ್ರಾರು ಭಕ್ತರು ದೇವರ ದರ್ಶನ ಪಡೆದು ಕಣ್ತುಂಬಿಕೊಂಡರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಬಸವೇಶ್ವರ ಭಕ್ತ ಮಂಡಳಿ ಮುಖಂಡ ಎಂ.ರುದ್ರೇಶ್ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಿ-ವಿಧಾನಗಳ ಮೂಲಕ ಬಸವೇಶ್ವರ ಸ್ವಾಮಿ ದೇವರನ್ನು ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.
ರಥೋತ್ಸವಕ್ಕೆ ಮರಳೆ ಗವಿ ಮಠದ ಶ್ರೀಗಳು, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಬೇಬಿಮಠದ ಶ್ರೀ ಮಹಂತಶಿವಯೋಗಿ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಉಚಿತ ಕಡಲೇಕಾಯಿ, ಕಬ್ಬು ವಿತರಣೆಗೆ ಚಾಲನೆ ನೀಡಿದರು.ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಮತ್ತು ಅರ್ಚಕ ದಂಪತಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಧರ್ಮ ಎಂದರೆ ಸಂಘರ್ಷವಲ್ಲ, ಅದೊಂದು ಬದುಕಿನ ದಾರಿ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಏಕತೆ ಮೂಡಿಸುವುದೇ ನಿಜವಾದ ಧರ್ಮ ಎಂದು ಪ್ರತಿಪಾದಿಸಿದರು.
ಶ್ರೀರಂಗಪಟ್ಟಣ ಬೇಬಿಮಠದ ಮಹಂತ ಶಿವಯೋಗಿ ಶ್ರೀ ಹಾಗೂ ಚಿತ್ರದುರ್ಗ ಯಾದವ ಮಹಾ ಸಂಸ್ಥಾನ ಮಠದ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಣ್ಣ ಸಮುದಾಯದ ಮಠಗಳು ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಮಠಗಳ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದರು.ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ಬುದ್ದಿಜೀವಿಗಳು, ಪ್ರಗತಿಪರರು ಎನ್ನುವ ಕೆಲವರು ಧರ್ಮದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಧರ್ಮದ ಪರ ನಿಲ್ಲಬೇಕು, ಆಗ ಸನಾತನ ಧರ್ಮ ಉಳಿಯುತ್ತದೆ ಎಂದರು.
ಕನಕಪುರದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ವಿಧಾನ ಪರಿಷತ್ ಮಾಜಿ ಮಾಜಿ ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಚಿತ್ರನಟ ದುನಿಯಾ ವಿಜಯ್, ಜಿಪಂ ಮಾಜಿ ಸದಸ್ಯ ಎ.ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ರ.ಆಂಜನಪ್ಪ, ಮೈಲಸಂದ್ರ ಮುನಿರಾಜು, ಮುಖಂಡ ಪರಮಶಿವಯ್ಯ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ. ಹನುಮಂತಯ್ಯ, ಚಿಕ್ಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಸೂಲಿಕೆರೆ ಗ್ರಾಪಂ ಸದಸ್ಯ ಎಸ್.ಆರ್. ಮೋಹನ್‍ಕುಮಾರ್, ವಿಜಯಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್.ದೀಪಕ್, ವಾಜರಹಳ್ಳಿ ಶಶಿಕುಮಾರ್, ಆರ್.ಮುನಿಸ್ವಾಮಿ ಇತರರು ಪಾಲ್ಗೊಂಡಿದ್ದರು.