ಡಂಬಳ: ಗ್ರಾಮದ ಬಿಒಐ ಬ್ಯಾಂಕ್ ಹತ್ತಿರ ನಿಲ್ಲಿಸಿದ್ದ ಅನ್ನಭಾಗ್ಯ ಅಕ್ಕಿಯ ಮೂರು ಲಾರಿಗಳ ಬ್ಯಾಟರಿ, ಒಂದು ಟಿಪ್ಪರ್, ರೈತರೊಬ್ಬರ ಟ್ರ್ಯಾಕ್ಟರ್ ಬ್ಯಾಟರಿಯನ್ನು ಮಂಗಳವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ಮಂಗಳವಾರ ತಡರಾತ್ರಿ ಬ್ಯಾಂಕ್ ಮತ್ತು ಬಸ್ ನಿಲ್ದಾಣದ ಸಮೀಪ ಅನ್ನಭಾಗ್ಯದ ಅಕ್ಕಿಯ ಸಾಗಿಸುತ್ತಿದ್ದ ಲಾರಿ ನಿಲ್ಲಿಸಿ ಚಾಲಕರು ಮನೆಗಳಿಗೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಬ್ಯಾಟರಿಗಳ ಕಳ್ಳತನ ಮಾಡಲಾಗಿದೆ. ಇದರಿಂದ ಲಾರಿ ಚಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಡಂಬಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಹೆಚ್ಚಿಸಬೇಕು. ರಾತ್ರಿ ಗ್ರಾಮದಲ್ಲಿ ಗಸ್ತು ಹಾಕಿಸಬೇಕು. ಗ್ರಾಮದ ಮುಖ್ಯ ಭಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ರೈತರು, ಗ್ರಾಮಸ್ಥರು, ಲಾರಿ ಚಾಲಕರು ಆಗ್ರಹಿಸಿದ್ದಾರೆ.ಅಲ್ಲದೆ ಲಾರಿಗಳ ಮತ್ತು ರೈತರ ಟ್ಯಾಕ್ಟರ್, ಟಿಪ್ಪರ್ ಬ್ಯಾಟರಿ ಮತ್ತು ಇತ್ತೀಚೆಗೆ ರೈತರ ಪರಿಕರಗಳ ಕಳ್ಳತನ ಪತ್ತೆಗೆ ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ರೈತರಾದ ಎಂ.ಎಸ್. ಯರಾಶಿ, ಕುಮಾರಸ್ವಾಮಿ ಹಿರೇಮಠ ಆಗ್ರಹಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೀಘ್ರ ಬಂಧನ: ಡಂಬಳ ಗ್ರಾಮದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಿಸುವ 3 ಲಾರಿಗಳ ಬ್ಯಾಟರಿ, ಒಂದು ಟ್ರ್ಯಾಕ್ಟರ್, ಒಂದು ಟಿಪ್ಪರ್‌ನ ಬ್ಯಾಟರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರನ್ನು ಪತ್ತೆ ಹಚ್ಚಲು ತಂಡವನ್ನು ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಬಂಧಿಸುತ್ತೇವೆ ಎಂದು ಸಿಪಿಐ ವಿಜಯಕುಮಾರ ತಿಳಿಸಿದರು.