ಹಂಪಿಯಲ್ಲಿ ಕೈಕೊಟ್ಟ ಬ್ಯಾಟರಿ ಚಾಲಿತ ವಾಹನಗಳು!

KannadaprabhaNewsNetwork |  
Published : Aug 05, 2025, 01:30 AM IST
4ಎಚ್‌ಪಿಟಿ1- ಹಂಪಿಯಲ್ಲಿ ರೈಲು ಮಾದರಿ ವಾಹನ ದುರಸ್ತಿಗೆ ಬಂದಿದ್ದು, ಈಗ ಓಡಾಟ ನಿಲ್ಲಿಸಿದೆ. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ರೂಪಿಸಿದ್ದ ಬ್ಯಾಟರಿ ಚಾಲಿತ ವಾಹನಗಳ ಯೋಜನೆ ಈಗ ಹಳ್ಳ ಹಿಡಿಯುತ್ತಿದೆ.

25 ವಾಹನಗಳಲ್ಲಿ ಒಂಬತ್ತು ಮಾತ್ರ ಓಡಾಟ । ಸ್ಮಾರಕ ನೋಡಲು ಪ್ರವಾಸಿಗರ ಪರದಾಟ

ಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ರೂಪಿಸಿದ್ದ ಬ್ಯಾಟರಿ ಚಾಲಿತ ವಾಹನಗಳ ಯೋಜನೆ ಈಗ ಹಳ್ಳ ಹಿಡಿಯುತ್ತಿದೆ. ಹಂಪಿಯಲ್ಲೀಗ 25 ಬ್ಯಾಟರಿ ಚಾಲಿತ ವಾಹನಗಳಲ್ಲಿ ಒಂಬತ್ತು ಮಾತ್ರ ಓಡಾಟ ಸರಿಯಾಗಿದ್ದು, ಇದರಲ್ಲಿ ಐದು ಮಾತ್ರ ರನ್‌ ಆಗುತ್ತಿವೆ!

ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದ ವರೆಗೆ ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯವನ್ನು ಹಂಪಿ ಪ್ರಾಧಿಕಾರ ಕಲ್ಪಿಸಿದೆ. ಈ ಯೋಜನೆಗೆ ದೇಶ, ವಿದೇಶಿ ಪ್ರವಾಸಿಗರು ಹಾಗೂ ಹಂಪಿಗೆ ಆಗಮಿಸುವ ಗಣ್ಯಾತಿ ಗಣ್ಯರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಹಂಪಿ ಪ್ರಾಧಿಕಾರದ ನಿರಾಸಕ್ತಿಯಿಂದ 25 ಬ್ಯಾಟರಿ ಚಾಲಿತ ವಾಹನಗಳಲ್ಲಿ ಬರೀ ಒಂಬತ್ತು ಮಾತ್ರ ಸರಿಯಾಗಿವೆ. ಇದರಲ್ಲಿ ದಿನಕ್ಕೆ ಐದು ಬ್ಯಾಟರಿ ಚಾಲಿತ ವಾಹನಗಳನ್ನು ಓಡಿಸಲಾಗುತ್ತಿದೆ. ಇದರಿಂದ ದೇಶ, ವಿದೇಶಿ ಪ್ರವಾಸಿಗರು ಬ್ಯಾಟರಿ ಚಾಲಿತ ವಾಹನಗಳಿಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಉಳಿದ ಸ್ಮಾರಕಗಳನ್ನು ನೋಡಲು ಸಮಯ ಹೊಂದಿಸಿಕೊಳ್ಳಲಾಗದೇ ಪರದಾಡುತ್ತಿದ್ದಾರೆ.

ಕೈಕೊಡುವ ಟೈಯರ್‌:

ಗೆಜ್ಜಲ ಮಂಟಪದಿಂದ ವಿಜಯ ವಿಠಲ ದೇವಾಲಯದ ರಸ್ತೆ ಸಂಪೂರ್ಣ ಹಾಳಾಗಿದೆ. ಮರಂನಿಂದ ಕೂಡಿರುವ ಈ ರಸ್ತೆ ಹಾಳಾಗಿದ್ದರಿಂದ ಸಣ್ಣ, ಸಣ್ಣ ಕಲ್ಲುಗಳು ಎದ್ದಿವೆ. ಇದರಿಂದ ಬ್ಯಾಟರಿ ಚಾಲಿತ ವಾಹನಗಳ ಟೈಯರ್‌ಗಳು ಕೂಡ ಹಾಳಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಆ.3ರಂದು ರೈಲು ಮಾದರಿ ವಾಹನದ ಟೈಯರ್‌ ಹಾಳಾಗಿದೆ. ಈ ವಾಹನ ಕೂಡ ಈಗ ಓಡಾಟ ನಡೆಸುತ್ತಿಲ್ಲ. ಇನ್ನೊಂದೆಡೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ಟೈಯರ್‌ಗಳು ಕೂಡ ಹಾಳಾಗುತ್ತಿವೆ. ಈ ರಸ್ತೆಗೆ ಗ್ರ್ಯಾವೆಲ್‌ ಹಾಕಿ, ಬ್ಯಾಟರಿ ಚಾಲಿತ ವಾಹನ ಹಾಗೂ ರೈಲು ಮಾದರಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರವಾಸಿಗರ ಆಗ್ರಹ ಕೂಡ ಆಗಿದೆ.

ಬ್ಯಾಟರಿ ಚಾಲಿತ ವಾಹನಗಳು ಕೈಕೊಡುತ್ತಿರುವುದರಿಂದ ರೈಲು ಮಾದರಿ ವಾಹನದ ವ್ಯವಸ್ಥೆಯನ್ನು ಹಂಪಿ ಪ್ರಾಧಿಕಾರ ಮಾಡಿತ್ತು. ಈಗ ರಸ್ತೆ ಹಾಳಾಗಿರುವುದರಿಂದ ಈ ವಾಹನದ ಟೈಯರ್‌ ಕೂಡ ಹಾಳಾಗಿವೆ. ಹಾಗಾಗಿ ಈ ವಾಹನ ಈಗ ರಸ್ತೆಗೆ ಇಳಿಯದಾಗಿದೆ. ಇದರಿಂದ ದೇಶ, ವಿದೇಶಿ ಪ್ರವಾಸಿಗರು ನಡೆದುಕೊಂಡೇ ಹಂಪಿ ಸ್ಮಾರಕಗಳ ವೀಕ್ಷಣೆಗೆ ತೆರಳುವಂತಾಗಿದೆ.

ಪಾರ್ಕಿಂಗ್‌ ನೆಟ್ಟಗಿಲ್ಲ:

ಗೆಜ್ಜಲ ಮಂಟಪದ ಬಳಿ ಪ್ರವಾಸಿಗರ ವಾಹನಗಳ ನಿಲುಗಡೆಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಈ ಪಾರ್ಕಿಂಗ್‌ ಸ್ಥಳ ಕೆಸರುಮಯವಾಗಿದ್ದು, ಇಲ್ಲೂ ಗ್ರ್ಯಾವೆಲ್‌ ಹಾಕಬೇಕಿದೆ. ಈಗ ಪ್ರವಾಸಿಗರು ಬ್ಯಾಟರಿ ಚಾಲಿತ ವಾಹನಗಳು ನಿಲುಗಡೆ ಹಾಗೂ ಓಡಾಡುವ ಸ್ಥಳದಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಬ್ಯಾಟರಿ ಚಾಲಿತ ವಾಹನಗಳ ಓಡಾಟಕ್ಕೂ ಸಮಸ್ಯೆ ಆಗಿದೆ.

ಮೂಡದ ಸಮನ್ವಯ:

ಗೆಜ್ಜಲ ಮಂಟಪದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ನಿಯೋಜನೆ ಮಾಡಲಾಗಿದೆ. ದೇಶ, ವಿದೇಶಿ ಪ್ರವಾಸಿಗರು ಬಂದಾಗ ಸುಗಮ ಸಂಚಾರಕ್ಕಾಗಿ ಕಾರ್ಯನಿರ್ವಹಣೆ ಮಾಡಬೇಕಾದ ಪ್ರವಾಸಿ ಮಿತ್ರರು ಮೊಬೈಲ್‌ಗಳಲ್ಲೇ ಮುಳುಗಡೆ ಆಗುತ್ತಿದ್ದಾರೆ. ಇನ್ನೂ ಬ್ಯಾಟರಿ ಚಾಲಿತ ವಾಹನಗಳ ಚಾಲಕಿಯರು ಹಾಗೂ ಪ್ರವಾಸಿಗರ ಮಧ್ಯೆ ಯಾವುದೋ ವಿಷಯಕ್ಕೆ ಕಿರಿಕ್‌ ಆದರೂ ತಲೆ ಕೆಡಿಸಿಕೊಳ್ಳದೇ ಈ ಪ್ರವಾಸಿ ಮಿತ್ರರು ಮೊಬೈಲ್‌ಗಳಲ್ಲೇ ಮುಳುಗೇಳುತ್ತಾರೆ.

ಜೂಜಾಟದ ಅಡ್ಡಾ:

ಗೆಜ್ಜಲ ಮಂಟಪದ ಸಮೀಪದಲ್ಲೇ ಇರುವ ಬಾಳೆ ತೋಟಗಳಲ್ಲಿ ಕೆಲವರು ಇಸ್ಪೀಟ್‌ ಜೂಜಾಟದಲ್ಲಿ ನಿರತರಾಗುತ್ತಾರೆ. ಇದನ್ನೂ ಕಂಡರೂ ಪ್ರವಾಸಿ ಮಿತ್ರರು ಹೆದರಿಸುವುದಿಲ್ಲ. ಅಲ್ಲದೇ, ಪೊಲೀಸರಿಗೂ ಮಾಹಿತಿ ನೀಡದೇ ಸುಮ್ಮನಾಗುತ್ತಿದ್ದಾರೆ. ಪವಿತ್ರ ಪ್ರವಾಸಿ ತಾಣದಲ್ಲೇ ಇಸ್ಪೀಟ್‌ ಜೂಜಾಟ ನಡೆಯುತ್ತಿದ್ದರೂ ಯಾರೂ ತಲೆ ಕೆಡಿಸಿಕೊಳ್ಳದೇ ಇರುವುದು ಹಲವು ಸೂಕ್ಷ್ಮಮತಿ ಪ್ರವಾಸಿಗರನ್ನೂ ಮುಜುಗರಕ್ಕೀಡು ಮಾಡುತ್ತಿದೆ.

ಪ್ರವಾಸಿಗರಿಗೆ ಇಲ್ಲದ ಆಸದ ವ್ಯವಸ್ಥೆ:

ಹಂಪಿ ವಿಜಯ ವಿಠಲ ದೇವಸ್ಥಾನದ ಬಳಿ ಬ್ಯಾಟರಿ ಚಾಲಿತ ವಾಹನಗಳಲ್ಲಿ ಪ್ರವಾಸಿಗರು ತೆರಳಲು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಸ್ಥಳದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿಲ್ಲ. ವಿಕಲಚೇತನರು, ವಯಸ್ಸಾದವರು, ಮಕ್ಕಳು ಬ್ಯಾಟರಿ ಚಾಲಿತ ವಾಹನಗಳಿಗಾಗಿ ಕಾಯುವಂತಾಗಿದೆ. ಇದರಿಂದ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ