ಕಾರವಾರ: ಮಾರಕವಾದ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಜನಪ್ರತಿನಿಧಿಗಳು ಪರಿಸರ ತಜ್ಞರ ಜೊತೆ ನಿಯೋಗದೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಬೇಕು ಎಂದು ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತುರ್ತು ಮನವಿ ಮಾಡಿದ್ದಾರೆ.
ವೃಕ್ಷಲಕ್ಷ ಆಂದೋಲನ ಪರಿಸರ ತಜ್ಞರ ಅಭಿಪ್ರಾಯದೊಂದಿಗೆ ಈ ಕುರಿತು ಪ್ರಕಟಣೆ ನೀಡಿ, ತಡವಾದರೂ ಉತ್ತರಕನ್ನಡ ಜಿಲ್ಲೆ ಸ್ಥಳೀಯ ಶಾಸಕರು, ರಾಜಕೀಯ ಮುಖಂಡರು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಕೈಬಿಡಲು ಒತ್ತಾಯ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕರ್ನಾಟಕ ಪವರ್ ಕಾರ್ಪೊರೇಷನ್ (ಕೆಪಿಸಿ) ಭೂಗತ ಯೋಜನೆ ಶರಾವತಿ ತೀರದ ರೈತರ ಬದುಕಿಗೆ ಆತಂಕ ತರಲಿದೆ. ಯೋಜನೆ ಕೈಬಿಡಲು ಪತ್ರ ಬರೆದಿದ್ದಾರೆ ಎಂಬ ಸಂಗತಿ ಸಮಾಧಾನಕರ. ಆದರೆ ಕೇವಲ ಹೇಳಿಕೆ ಪತ್ರಕ್ಕೇ ಸೀಮಿತವಾಗಬಾರದು. ಮುಖ್ಯಮಂತ್ರಿ ಅವರಲ್ಲಿ ನಿಯೋಗ ಹೋಗಬೇಕು ಎಂದಿದ್ದಾರೆ.ಇದೇ ಹೊತ್ತಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯೋಜನೆ ಕೈಬಿಡಲು ಕೆಪಿಸಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಗೆ ಆಗ್ರಹಿಸಬೇಕು ಎಂದು ಪರಿಸರ ಸಂಘಟನೆಗಳು ವಿಶೇಷ ಮನವಿ ಮಾಡಿವೆ. ಶಾಸಕ ದಿನಕರ ಶೆಟ್ಟಿ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸೇರಿ ಮುಖ್ಯಮಂತ್ರಿ ಭೇಟಿ ನಿಶ್ಚಯಿಸಬೇಕು ಎಂದು ಮನವಿ ಮಾಡಲಾಗಿದೆ.ಈಗಾಗಲೇ ಶರಾವತಿ ಕಣಿವೆ ಭೂಧಾರಣಾ ಸಾಮರ್ಥ್ಯ ಮುಗಿದಿದೆ ಎಂಬ ಕೆಪಿಸಿ ಪ್ರಾಯೋಜನೆ ಮಾಡಿದ್ದ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಪರಿಸರ ಕಾರ್ಯಕರ್ತರು ಸರ್ಕಾರದ ಗಮನ ಸೆಳೆದಿದ್ದಾರೆ.
ಭೂಗತ ಯೋಜನೆ ಜಾರಿಯಿಂದ ಅರಣ್ಯ ಕಾಯಿದೆ, ವನ್ಯಜೀವಿ, ಜೀವವೈವಿಧ್ಯ, ಪರಿಸರ ಕಾಯಿದೆಗಳ ಉಲ್ಲಂಘನೆ ಆಗಲಿದೆ. ಈ ಯೋಜನೆಯ ವಿದ್ಯುತ್ ತಂತಿ ಮಾರ್ಗದಿಂದ ಆಗುವ ಅರಣ್ಯ ನಾಶ ವಿವರ ಮರೆಮಾಚಿದ್ದಾರೆ ಎಂದು ತಜ್ಞರು ಎತ್ತಿ ಹೇಳಿದ್ದಾರೆ.ಗೇರುಸೊಪ್ಪ ಕೆಳಹಂತದ ಶರಾವತಿ ನದಿ ತೀರದ ಒಂದು ಲಕ್ಷ ರೈತರು, ಮೀನುಗಾರರು ಯೋಜನೆಯಿಂದ ಅತಂತ್ರರಾಗುವ ಸಂಗತಿಯನ್ನೇ ಪರಿಗಣಿಸಿಲ್ಲ ಎಂದು ತಜ್ಞರ ಅಭಿಪ್ರಾಯ ಪರಿಗಣಿಸಬೇಕು. ಗೇರುಸೊಪ್ಪ, ಜೋಗ ಪ್ರದೇಶ ಭೂಕುಸಿತ ಸೂಕ್ಷ್ಮವಲಯದಲ್ಲಿದೆ ಎಂಬುದನ್ನು ಭೂಕುಸಿತ ಅಧ್ಯಯನ ಸಮಿತಿ ಎತ್ತಿ ಹೇಳಿದೆ.
ಸಾರ್ವಜನಿಕ ಅಹವಾಲು ಸಭೆ ನಡೆದಿಲ್ಲ. ವಿವರ ಯೋಜನಾ ವರದಿ ಜನತೆಗೆ ನೀಡಿಲ್ಲ. ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಎಲ್ಲ ಪಂಚಾಯಿತಿಗಳ ಜನಪ್ರತಿನಿಧಿಗಳು ಭೂಗತ ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡಿದ್ದಾರೆ ಎಂಬುದನ್ನು ಪರಿಗಣಿಸಬೇಕು ಎಂದು ಜೀವವೈವಿಧ್ಯ ಮಂಡಳಿಯ ಮಾಜಿ ಸದಸ್ಯರಾದ ಡಾ. ಪ್ರಕಾಶ್ ಮತ್ತು ಕೆ.ವೆಂಕಟೇಶ ಹೇಳಿದ್ದಾರೆ.ಶಿವಮೊಗ್ಗ, ಸಾಗರ, ಹೊನ್ನಾವರ, ಶಿರಸಿ, ಹೊಸನಗರಗಳಲ್ಲಿ ಸ್ಥಾನಿಕ ರೈತರು, ಮೀನುಗಾರರು, ಪ್ರಜ್ಞಾವಂತ ನಾಗರಿಕರು ಶರಾವತಿ ಭೂಗತ ಯೋಜನೆ ಜಾರಿ ಮಾಡಬಾರದು ಎಂದು ಸಭೆ, ಜಾಥಾ, ಪ್ರತಿಭಟನೆ ನಡೆಸಿದ್ದಾರೆ. ಹೊನ್ನಾವರ, ಸಾಗರಗಳ ವನ್ಯಜೀವಿ ಅರಣ್ಯ ಅಧಿಕಾರಿಗಳು, ಕೇಂದ್ರ ಅರಣ್ಯ ಸಚಿವಾಲಯದ ಅರಣ್ಯ ಅಧಿಕಾರಿಗಳು ಭೂಗತ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ ಎಂಬ ಸಂಗತಿ ಬಹಿರಂಗವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಪಾರ ಜೀವ ವೈವಿಧ್ಯ ನಾಶ:ಸಿಂಗಳೀಕ ಎಂಬ ಅಪರೂಪದ ವನ್ಯಜೀವಿ ಅಳಿವಿನ ಬಗ್ಗೆ ಅಷ್ಟೇ ಅಲ್ಲ, ಅಪಾರ ಜೀವ, ಸಸ್ಯ, ರೈತ, ವೀನುಗಾರ, ಕೃಷಿ, ತೋಟಗಾರಿಕಾ ವೈವಿಧ್ಯ, ತಳಿಗಳು, ಪಾರಂಪರಿಕ ಜನ ಜೀವನ ನಾಶವಾಗುವ ಭೀತಿಯನ್ನು ಜೀವ ವೈವಿಧ್ಯ ಮಂಡಳಿಯ ಮುಖ್ಯಸ್ಥರು 2020 ರಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದರು.
ಸೋಂದಾ ಸ್ವರ್ಣವಲ್ಲೀ ಶ್ರೀಗಳು ಭೂಗತ ಯೋಜನೆ ಅನಾಹುತಕಾರಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂಬುದನ್ನು ವೃಕ್ಷ ಆಂದೋಲನದ ಗೌರವ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ನೆನಪಿಸಿದ್ದಾರೆ.ವೃಕ್ಷ ಆಂದೋಲನದ ಪರವಾಗಿ ಗಣಪತಿ ಕೆ., ಕೆ.ವೆಂಕಟೇಶ, ಶ್ರೀಪಾದ ಬಿಚ್ಚುಗತ್ತಿ, ಕೇಶವ ನಾಯ್ಕ ಬಳ್ಕೂರ ಪ್ರಕಟಣೆ ನೀಡಿದ್ದಾರೆ.
ಫೋಟೊ: ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿಯ ಶರಾವತಿ ಕಣಿವೆಯ ನಯನ ಮನೋಹರ ದೃಶ್ಯ