ಯೂರಿಯಾ: ಸರ್ಕಾರದ ವಿರುದ್ಧ ಜೆಡಿಎಸ್‌ ಪ್ರತಿಭಟನೆ

KannadaprabhaNewsNetwork |  
Published : Aug 05, 2025, 01:30 AM IST

ಸಾರಾಂಶ

ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆ ಬಿದ್ದು ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಆದರೆ, ಸರ್ಕಾರ ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ.

ಕೊಪ್ಪಳ:

ಸಮರ್ಪಕ ಯೂರಿಯಾ ಪೂರೈಕೆ ಮಾಡುವಲ್ಲಿ ವಿಫಲವಾಗಿರುವ ಹಾಗೂ ರೈತರಿಗೆ ದ್ರೋಹ ಬಗೆಯುತ್ತಿರುವ ರಾಜ್ಯ ಸರ್ಕಾರ ವಿಸರ್ಜಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ ಮಾತನಾಡಿ, ರಾಜ್ಯದಲ್ಲಿ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯದಿಂದ ಜನರು ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆ ಬಿದ್ದು ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ಆದರೆ, ಸರ್ಕಾರ ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿದೆ. ಯೂರಿಯಾ, ಡಿಪಿಎ ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ಗೊಬ್ಬರಗಳನ್ನು ಕಾಳಸಂತೆಯಲ್ಲಿ ವರ್ತಕರು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಶರಣಪ್ಪ ಕುಂಬಾರ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 6.8 ಲಕ್ಷ ಟನ್ ರಸಗೊಬ್ಬರ ನಿಗದಿ ಮಾಡಿದ್ದು, ಈ ಪೈಕಿ ಕೇವಲ 5.27 ಲಕ್ಷ ಟನ್ ನೀಡಿರುವುದಾಗಿ ಆಪಾದನೆ ಮಾಡುತ್ತಿದೆ. ಆದರೆ, ಬಾಕಿಯಿರುವ 1.5 ಲಕ್ಷ ಟನ್ ರಸಗೊಬ್ಬರವನ್ನು ಕೇಂದ್ರ ಸರ್ಕಾರ ಸಂಪರ್ಕಿಸಿ ತರುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

2 ತಿಂಗಳು ಮುಂಗಾರು ಮಳೆ ಅಬ್ಬರಿಸಿದ್ದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಆದರೆ, ಸರ್ಕಾರ ಪರಿಹಾರ ನೀಡಿಲ್ಲ. ಬಯಲುಸೀಮೆ ಜಿಲ್ಲೆಗಳಲ್ಲಿ 6 ವಾರಗಳಿಂದ ಮಳೆ ಕೊರತೆ ಉಂಟಾಗಿ ರೈತರು ನಾಟಿ ಮಾಡಿದ ಫಸಲು ಒಣಗುತ್ತಿವೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು, ಆಹಾರ ಮತ್ತು ಮೇವಿನ ಕೊರತೆ ಉಂಟಾಗಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಮುಂದಿನ ತಿಂಗಳು ಅಗತ್ಯ ಮಳೆ ಬಿದ್ದರೆ ಅಲ್ಪಾವಧಿ ಬೆಳೆ ಬೆಳೆಯಲು ಯಾವುದೇ ಯೋಜನೆ ರೂಪಿಸಿಲ್ಲ. ಬೆಳೆ ನಷ್ಟಕ್ಕೆ ಸಂಬಂಧಿಸಿ ವಿಮಾ ಕಂಪನಿಗಳಿಂದ ರೈತರಿಗೆ ಪರಿಹಾರ ನೀಡಲು ಆಸಕ್ತಿ ತೋರುತ್ತಿಲ್ಲ. ಈ ಎಲ್ಲ ವೈಫಲ್ಯಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಲು ನೈತಿಕ ಹಕ್ಕು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರಕ್ಕೆ ರೈತರ ಸಮಸ್ಯೆ ಹಾಗೂ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಮುಖಂಡರಾದ ಸಂಗಮೇಶ ಡಂಬಳ, ಈಶಪ್ಪ ಮಾದಿನೂರ, ಮೂರ್ತೆಪ್ಪ ಹಿಟ್ನಾಳ, ಶರಣಪ್ಪ ಜಡಿ, ಬಸವರಾಜ ಗುಳಗುಳಿ, ಕರಿಯಪ್ಪ ಹಾಲವರ್ತಿ, ಸಿದ್ದರೆಡ್ಡಿ ಸಿಂದೋಗಿ, ಪ್ರವೀಣ ಇಟಗಿ, ಸಯ್ಯದ್ ಮೊಹಮ್ಮದ್‌ ಹುಸೇನ, ಶರಣಪ್ಪ ಮರ್ಕಟ್, ಶಿವಕುಮಾರ್ ಏಣಿಗಿ, ರಮೇಶ ಡಮ್ರಳ್ಳಿ, ಮಾರುತಿ ಪೇರ್ಮಿ, ಶಾಂತಕುಮಾರ ದೊಡ್ಮನಿ, ದ್ಯಾಮಣ್ಣ ಕಲಿಕೇರಿ, ಮಹೇಶ ಕಂದಾರಿ, ರವಿ ಮೇದಾರ, ಸೋಮನಗೌಡ ಹೊಗರ್ನಾಳ, ಲೋಕೇಶ ಬಾರಕೇರ, ದೇವರಾಜ ಮಡ್ಡಿ, ಯಮನೂರಪ್ಪ ರಾಥೋಡ, ಹೇಮಣ್ಣ ಕಲಿಕೇರಿ, ಶಂಕ್ರಪ್ಪ ಕಟ್ಟಿಮನಿ, ಪ್ರಜ್ವಲ್ ರೆಡ್ಡಿ, ರಂಗಪ್ಪ ಪೂಜಾರ, ಮೌನೇಶ ಕಿನ್ನಾಳ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ