ಬಿಬಿಎಂಪಿ 5 ಹೋಳು ಮಾಡಿದ ಬಳಿಕ ಚುನಾವಣೆ?

KannadaprabhaNewsNetwork | Updated : Jun 11 2024, 11:14 AM IST

ಸಾರಾಂಶ

ಬಿಬಿಎಂಪಿಯನ್ನು ಐದು ಹೋಳು ಮಾಡಿದ ಬಳಿಕ ಚುನಾವಣೆ ನಡೆಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬೆಂಗಳೂರು ಶಾಸಕರು, ಸಚಿವರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

 ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಐದು ಭಾಗಗಳಾಗಿ ವಿಭಜನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಮಹತ್ವದ ಚರ್ಚೆ ನಡೆಸಿದ್ದು, ವಿಭಜನೆ ಬಳಿಕ ಬಿಬಿಎಂಪಿ ಚುನಾವಣೆ ನಡೆಸುವ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸಲು ನಿರ್ಧರಿಸಲಾಗಿದೆ.

ತನ್ಮೂಲಕ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಭಜನೆ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರವು ಮತ್ತೊಮ್ಮೆ ಮುಂದಾಗಿದೆ. ಸೋಮವಾರ ಸಂಜೆ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಬೆಂಗಳೂರು ಸಚಿವರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದರು.

ಕಳೆದ 4 ವರ್ಷಗಳಿಂದ ನೆನೆಗುದಿಗೆಗೆ ಬಿದ್ದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಮಳೆಗಾಲದ ಬಳಿಕ ನಡೆಸುವ ಕುರಿತು ಚರ್ಚಿಸಲಾಯಿತು. ಈ ವೇಳೆ ಐದು ಪಾಲಿಕೆಗಳಾಗಿ ವಿಭಜನೆ ಮಾಡುವ ಕುರಿತು ಚರ್ಚೆಯಾಗಿದ್ದು, ಸುಪ್ರೀಂ ಕೋರ್ಟ್‌ಗೆ ಐದು ಪಾಲಿಕೆಗಳಾಗಿ ವಿಭಜನೆ ಮಾಡಿದ ಬಳಿಕ ಚುನಾವಣೆ ನಡೆಸುವುದಾಗಿ ಮನವರಿಕೆ ಮಾಡಿಕೊಡೋಣ. ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದರೆ ವಿಭಜನೆ ನಡೆಸಿಯೇ ಚುನಾವಣೆಗೆ ಹೋಗೋಣ. ಇಲ್ಲದಿದ್ದರೆ ಹಾಲಿ ಇರುವ 225 ವಾರ್ಡ್‌ಗಳಿಗೆ ಮಳೆಗಾಲ ಮುಗಿಯುತ್ತಿದ್ದಂತೆ ಚುನಾವಣೆ ನಡೆಸೋಣ ಎಂದು ಬಿಬಿಎಂಪಿ ವ್ಯಾಪ್ತಿಯ ಸಚಿವರು ಹಾಗೂ ಶಾಸಕರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.ಬಿಬಿಎಂಪಿ ಹೋಳು ಹೇಗೆ?

ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್‌ ನೇತೃತ್ವದಲ್ಲಿ ಬಿಬಿಎಂಪಿ ವಿಭಜನೆ ಕುರಿತು ರಚಿಸಿದ್ದ ಸಮಿತಿಯು 2018ರಲ್ಲಿ ವರದಿ ಸಲ್ಲಿಸಿದ್ದು, ಇದರಲ್ಲಿ ಬಿಬಿಎಂಪಿಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ತರಬೇಕು.

ಬೆಂಗಳೂರು ಸುತ್ತಲಿನ ಹಲವು ಪ್ರದೇಶವನ್ನು ಸೇರಿಸಿ 400 ವಾರ್ಡ್‌ಗಳನ್ನು ರಚಿಸಿ ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಎಂಬ ಐದು ಪಾಲಿಕೆಗಳನ್ನು ರಚಿಸಬೇಕು. ಇವುಗಳ ಮೇಲೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕು ಎಂದು ವರದಿಯಲ್ಲಿ ತಿಳಿಸಿದ್ದರು. ಈ ಬಗ್ಗೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿ.ಎಸ್‌.ಪಾಟೀಲ್‌ ಹಾಗೂ ಸದಸ್ಯ, ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಅವರನ್ನು ಕರೆಸಿ ಚರ್ಚೆ ನಡೆಸಿದ್ದಾರೆ. ಜತೆಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲೂ ಚರ್ಚೆ ಆಗಿರುವುದರಿಂದ ಬಿಬಿಎಂಪಿ ವಿಭಜನೆ ಬಗ್ಗೆ ತೀವ್ರ ಕುತೂಹಲ ಮೂಡಿದೆ.‘ಚುನಾವಣೆ ಸಿದ್ಧತೆ ಶುರು ಮಾಡಿ’

ಈ ನಡುವೆ ಸುಪ್ರೀಂ ಕೋರ್ಟ್‌ ಬಿಬಿಎಂಪಿ ವಿಭಜನೆಗೆ ಅನುಮತಿ ನೀಡದಿದ್ದರೆ ಡಿಸೆಂಬರ್‌ ಒಳಗಾಗಿ ಬಿಬಿಎಂಪಿ ಚುನಾವಣೆ ನಡೆಸಬೇಕಾಗುತ್ತದೆ. ಅದಕ್ಕೂ ಹೆಚ್ಚು ಸಮಯಾವಕಾಶವನ್ನು ನ್ಯಾಯಾಲಯ ನೀಡುವುದು ಕಷ್ಟ. ಹೀಗಾಗಿ ಯಾವುದೇ ಕ್ಷಣದಲ್ಲಿ ಚುನಾವಣೆ ನಡೆಸಲೂ ಸಿದ್ಧರಾಗಿರಬೇಕು ಎಂದು ಶಾಸಕರಿಗೆ ಸೂಚನೆನೀಡಲಾಯಿತು. ಇನ್ನು ಪಕ್ಷಕ್ಕೆ ಪ್ರಸ್ತುತ ಸುಲಭದ ವಾತಾವರಣ ಇಲ್ಲ. ಹೀಗಾಗಿ ಆಯಾ ವಾರ್ಡ್‌ಗಳಲ್ಲಿ ಗೆಲ್ಲಲು ಅನುಕೂಲವಾಗುವಂತಹ ಮೀಸಲಾತಿ ಬಗ್ಗೆ ಶಿಫಾರಸುಗಳನ್ನು ನೀಡಿ. ಜತೆಗೆ ಸಂಭವನೀಯ ಅಭ್ಯರ್ಥಿಗಳಿಗೆ ತಿಳಿಸಿ ಈಗಿನಿಂದಲೇ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸೂಚಿಸಿ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಬೆಂಗಳೂರು ನಗರ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ನೀರಸ ಪ್ರದರ್ಶನ ನೀಡಿದೆ. ಈ ಬಗ್ಗೆ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಈ ರೀತಿ ಆಗದಂತೆ ಎಚ್ಚರವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಡಿಸೆಂಬರ್‌ ಒಳಗೆ ಬಿಬಿಎಂಪಿ ಚುನಾವಣೆ: ರಾಮಲಿಂಗಾರೆಡ್ಡಿ

ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಮಾಡಬೇಕು ಎಂಬ ಕುರಿತು ಚರ್ಚೆಯಾಗಿದೆ. ಇನ್ನೂ ಬಹಳ ದಿನಗಳ ಕಾಲ ಬಿಬಿಎಂಪಿ ಚುನಾವಣೆ ಮುಂದೂಡಲು ಆಗಲ್ಲ. ಈಗಾಗಲೇ ಕೋರ್ಟ್ ಚುನಾವಣೆಗೆ ನಿರ್ದೇಶನ ನೀಡಿದೆ. ಹೀಗಾಗಿ 225 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಬಿಬಿಎಂಪಿ ಚುನಾವಣೆಗೆ ಇರುವ ಕಾನೂನು ತೊಡಕು ಹಾಗೂ ಮೀಸಲಾತಿ ಬಗೆಹರಿಸಿ ಚುನಾವಣೆ ಮಾಡಲಿದ್ದೇವೆ. ಮಳೆಗಾಲ ಮುಗಿಯುತ್ತಿದ್ದಂತೆ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಬಿಬಿಎಂಪಿ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದ್ದು, ಪಾಲಿಕೆ ಚುನಾವಣಾ ಕಾರ್ಯಕ್ಕೆ ಪಕ್ಷದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಇನ್ನು ಲೋಕಸಭಾ ಚುನಾವಣೆ ಫಲಿತಾಂಶದ ಸೋಲಿನ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಈ‌ ಬಗ್ಗೆ ಯಾರು‌ ಮಾತನಾಡಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯುವ ಬಗ್ಗೆ ‘ಕನ್ನಡಪ್ರಭ’ ಮೇ 21ರಂದು ವಿಶೇಷ ವರದಿ ಪ್ರಕಟಿಸಿತ್ತು.

Share this article