ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ 2022-23ನೇ ಸಾಲಿನಲ್ಲಿ ಬಿಬಿಎಂಪಿ ಪ್ರೌಢಶಾಲೆಗಳು ಶೇ. 67.53ರಷ್ಟು ಫಲಿತಾಂಶ ಪಡೆದುಕೊಂಡಿದ್ದವು. ಈ ವರ್ಷ ಶೇ. 1.25ರಷ್ಟು ಹೆಚ್ಚಿನ ಫಲಿತಾಂಶ ಬಂದಿದೆ.
ಮತ್ತಿಕೆರೆಯ ಬಾಲಕಿಯರ ಪ್ರೌಢಶಾಲೆಯು ಶೇ. 92.78ರಷ್ಟು ಫಲಿತಾಂಶ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಉಳಿದಂತೆ ಭೈರವೇಶ್ವರನಗರ ಪ್ರೌಢಶಾಲೆಯು ಶೇ.91.98, ಹೇರೋಹಳ್ಳಿ ಪ್ರೌಢಶಾಲೆಯು ಶೇ.90.56ರಷ್ಟು ಫಲಿತಾಂಶ ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. 2023-24ನೇ ಸಾಲಿನಲ್ಲಿ ಒಟ್ಟು 66 ವಿದ್ಯಾರ್ಥಿಗಳು ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನ 625ಕ್ಕೆ 619 ಅಂಕಗಳಿಸಿ, ಬಿಬಿಎಂಪಿ ಪ್ರೌಢಶಾಲೆಯಲ್ಲಿಯೇ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಲಗ್ಗೆರೆ ಪ್ರೌಢಶಾಲೆಯ ಟಿ.ಜೆ.ಯಶವಂತ್ 610 ಅಂಕ ಪಡೆದಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ತಂದೆ ಜಗದೀಶ್ ಕೈಗಾರಿಕೆಯೊಂದರಲ್ಲಿ ದಿನಗೂಲಿ ನೌಕರ, ತಾಯಿ ಪ್ರೇಮಾ ಗಾರ್ಮೆಂಟ್ಸ್ ಉದ್ಯೋಗಿ. ಈ ದಂಪತಿಯ ಪುತ್ರ ಟಿ.ಜೆ.ಯಶವಂತ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 610 ಅಂಕಗಳನ್ನು (ಶೇ.97.6) ಪಡೆದು ಸಾಧನೆ ಮಾಡಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ ಇಲ್ಲವೆಂದು ಭಾವಿಸುವುದು ತಪ್ಪು. ನಮ್ಮ ಶಾಲೆಯಲ್ಲಿನ ಶಿಕ್ಷಕರು ತುಂಬಾ ಆಸಕ್ತಿದಾಯಕವಾಗಿ ಬೋಧನೆ ಮಾಡುವುದರಿಂದಲೇ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಗಣಿತಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರ ಬದುಕು, ಜೀವನ, ಸಾಧನೆ ನನಗೆ ಪ್ರೇರಣೆ. ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.
ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಖುಷಿಯಿದೆ. ಶಿಕ್ಷಕರ ಮಾರ್ಗದರ್ಶನ, ಪೋಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ. ನಿತ್ಯ ಕೆಲ ಗಂಟೆಗಳ ಕಾಲ ಓದಿನ ಜೊತೆಗೆ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲು ಭಾಗಿಯಾಗುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಅನೇಕ ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ಮೂಲಕ ಸಿದ್ಧತೆ ನಡೆಸಿದ್ದೆ. ಮುಂದೆ ಪಿಸಿಎಂಸಿ ಓದಬೇಕು ಎಂದು ತೀರ್ಮಾನಿಸಿದ್ದೇನೆ. - ಸೌರವ್ ಕೌಶಿಕ್, 3ನೇ ಟಾಪರ್, ವಿವಿಎಸ್ ಸರ್ದಾರ್ ಪಟೇಲ್ ಹೈಸ್ಕೂಲ್, ರಾಜಾಜಿನಗರ