ಮಾಗಡಿ ರಸ್ತೆ ಸುಮನಹಳ್ಳಿ ಜಂಕ್ಷನ್ ಬಳಿ ಸರ್ಕಾರಿ ಜಾಗ ಕಬಳಿಸಿ ಆಸ್ಪತ್ರೆ ಕಟ್ಟುತ್ತಿದೆ ಬಿಬಿಎಂಪಿ!

KannadaprabhaNewsNetwork |  
Published : Jul 20, 2024, 01:46 AM ISTUpdated : Jul 20, 2024, 09:08 AM IST
ಎಚ್‌.ಸಿ.ಮಹದೇವಪ್ಪ | Kannada Prabha

ಸಾರಾಂಶ

ಮಾಗಡಿ ರಸ್ತೆ ಸುಮನಹಳ್ಳಿ ಜಂಕ್ಷನ್ ಬಳಿ ಕೇಂದ್ರ ಪರಿಹಾರ ಸಮಿತಿಯಿಂದ ಕುಷ್ಠ ರೋಗಿಗಳ ನಿರಾಶ್ರಿತರ ಕೇಂದ್ರಕ್ಕೆ ಗುತ್ತಿಗೆ ನೀಡಿರುವ ಜಮೀನನ್ನು ಬಿಬಿಎಂಪಿಯೇ ಭಾಗಶಃ ಒತ್ತುವರಿ ಮಾಡಿಕೊಂಡು ಶಾಲೆ ಮತ್ತು ಆಸ್ಪತ್ರೆ, ಆಸ್ಪತ್ರೆ ತ್ಯಾಜ್ಯ ಘಟಕ ಮತ್ತಿತರ ಕಟ್ಟಡಗಳನ್ನು ನಿರ್ಮಿಸುತ್ತಿದೆ!

 ವಿಧಾನ ಪರಿಷತ್ :  ಮಾಗಡಿ ರಸ್ತೆ ಸುಮನಹಳ್ಳಿ ಜಂಕ್ಷನ್ ಬಳಿ ಕೇಂದ್ರ ಪರಿಹಾರ ಸಮಿತಿಯಿಂದ ಕುಷ್ಠ ರೋಗಿಗಳ ನಿರಾಶ್ರಿತರ ಕೇಂದ್ರಕ್ಕೆ ಗುತ್ತಿಗೆ ನೀಡಿರುವ ಜಮೀನನ್ನು ಬಿಬಿಎಂಪಿಯೇ ಭಾಗಶಃ ಒತ್ತುವರಿ ಮಾಡಿಕೊಂಡು ಶಾಲೆ ಮತ್ತು ಆಸ್ಪತ್ರೆ, ಆಸ್ಪತ್ರೆ ತ್ಯಾಜ್ಯ ಘಟಕ ಮತ್ತಿತರ ಕಟ್ಟಡಗಳನ್ನು ನಿರ್ಮಿಸುತ್ತಿದೆ!

ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದ ಜಮೀನು ಒತ್ತುವರಿ ಕುರಿತು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸದನಕ್ಕೆ ಉತ್ತರಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕೇಂದ್ರ ಪರಿಹಾರ ಸಮಿತಿ ಒಡೆತನದಲ್ಲಿ 308.03 ಎಕರೆ ಜಮೀನಿದೆ. ಅದರಲ್ಲಿ 85.07 ಎಕರೆ ಜಮೀನನ್ನು ವಿವಿಧ ಇಲಾಖೆ, ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, 58.37 ಎಕರೆ ಜಮೀನನ್ನು ವಿವಿಧ ಇಲಾಖೆ, ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ.

ಕುಷ್ಠ ರೋಗಿಗಳ ಪುನರ್ವಸತಿ ಕೇಂದ್ರಕ್ಕೆ 1 ಎಕರೆ ಜಮೀನಿಗೆ ವರ್ಷಕ್ಕೆ ₹1,000 ದಂತೆ 43.19 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಅದೇ ರೀತಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಎಕರೆಗೆ ₹1,000 ದಂತೆ 30 ವರ್ಷಗಳ ಅವಧಿಗೆ 5 ಎಕರೆ ಜಮೀನು ಗುತ್ತಿಗೆ, ಬಿಡಬ್ಲ್ಯುಎಸ್‌ಎಸ್‌ಬಿಗೆ 4.18 ಎಕರೆಯನ್ನು 99 ವರ್ಷಗಳ ಅವಧಿಗೆ ಲೀಸ್‌, ಬಿಎಂಟಿಸಿಗೆ ವರ್ಷಕ್ಕೆ ₹10,000 ದಂತೆ 4 ಎಕರೆಯನ್ನು 30 ವರ್ಷಗಳಿಗೆ ಗುತ್ತಿಗೆ ಮತ್ತು ಬಿಬಿಎಂಪಿ ಚಿತಾಗಾರಕ್ಕೆ 2 ಎಕರೆ ಜಮೀನನ್ನು ಎಕರೆಗೆ ₹100 ನಂತೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ.

ಬಿಬಿಎಂಪಿ ಒತ್ತುವರಿ ಮಾಡಿಕೊಂಡಿರುವ ಜಮೀನಿನ ಕುರಿತು ನ್ಯಾಯಾಲಯದ ಮೊರೆ ಹೋಗಿರುವ ಕುಷ್ಠ ರೋಗಿಗಳ ಪುನರ್‌ ವಸತಿ ಕೇಂದ್ರ ತಡೆಯಾಜ್ಞೆ ಪಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ