ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬೆಂಗಳೂರಿನ ಕಸ ವಿಲೇವಾರಿಯ ಗುತ್ತಿಗೆಯನ್ನು ಏಕ ಕಾಲಕ್ಕೆ ಮುಂದಿನ 30 ವರ್ಷಕ್ಕೆ ನೀಡುವುದಕ್ಕೆ ಮುಂದಾಗಿರುವ ಬಿಬಿಎಂಪಿಯು, 30ನೇ ವರ್ಷಕ್ಕೆ ಕಸ ವಿಲೇವಾರಿ ವೆಚ್ಚವೇ ಇಂದಿನ ಬಿಬಿಎಂಪಿಯ ವಾರ್ಷಿಕ ಬಜೆಟ್ ಮೊತ್ತಕ್ಕಿಂತ ಹೆಚ್ಚಾಗಲಿದೆ.
ಈ ಕುರಿತು ಈಗಾಗಲೇ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್) ‘ಸಮಗ್ರ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ’ ಹೆಸರಿನಲ್ಲಿ ಯೋಜನೆ ರೂಪಿಸಿ ಸಚಿವ ಸಂಪುಟದಿಂದ ಅನುಮೋದನೆ ಪಡೆದು ಟೆಂಡರ್ ಆಹ್ವಾನಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರತಿನಿತ್ಯ ಸುಮಾರು 5 ಸಾವಿರ ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರ ನಿರ್ವಹಣೆಗೆ ಸದ್ಯ ವರ್ಷಕ್ಕೆ ಸುಮಾರು 480 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. 2022ರಲ್ಲಿ ಕರೆದ ಹೊಸ ಪ್ಯಾಕೇಜ್ ಅನುಸಾರ ಈ ಮೊತ್ತ 510 ಕೋಟಿ ರು. ಎಂದು ಟೆಂಡರ್ ದಾಖಲೆಗಳಲ್ಲಿ ಪ್ರಸ್ತಾವಿಸಲಾಗಿದೆ. ಗುತ್ತಿಗೆದಾರರು ಈ ಟೆಂಡರ್ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದರಿಂದ ಅಂತಿಮಗೊಂಡಿಲ್ಲ. ಈ ನಡುವೆ ಬಿಎಸ್‌ಡಬ್ಲ್ಯೂಎಂಎಲ್ ಸಮಗ್ರ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹೆಸರಿನಲ್ಲಿ ಹೊಸ ವ್ಯವಸ್ಥೆ ಜಾರಿಗೊಳಿಸಲು ಸಜ್ಜಾಗಿದೆ.
ಬಜೆಟ್ ಮೀರಿಸುವ ಕಸದ ವೆಚ್ಚ
ಸದ್ಯ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸುಮಾರು 480 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಇದೀಗ ಬಿಎಸ್‌ಡಬ್ಲ್ಯೂಎಂಎಲ್ ರೂಪಿಸಿರುವ ಯೋಜನೆಯಲ್ಲಿ ನಗರದಲ್ಲಿ ದಿನಕ್ಕೆ 6,566 ಟನ್ ಕಸ ಉತ್ಪಾದನೆ ಲೆಕ್ಕಾಚಾರದಲ್ಲಿ ಟೆಂಡರ್ ರೂಪಿಸಲಾಗಿದೆ. ಈ ಪ್ರಕಾರ ದಿನಕ್ಕೆ 1.80 ಕೋಟಿ ರು. ನಂತೆ ವರ್ಷದಲ್ಲಿ 730 ಕೋಟಿ ರು. ವೆಚ್ಚ ಮಾಡಲಾಗುತ್ತದೆ. ಈ ಮೊತ್ತಕ್ಕೆ ಶೇ.10ರಷ್ಟು ಪ್ರತಿ ವರ್ಷ ಗುತ್ತಿಗೆದಾರರಿಗೆ ಹೆಚ್ಚುವರಿ ಮೊತ್ತ ನೀಡಲಾಗುತ್ತದೆ. ಅಲ್ಲಿಗೆ ಮುಂದಿನ 30 ವರ್ಷಕ್ಕೆ ಒಂದು ದಿನ ಕಸ ವಿಲೇವಾರಿ 33 ಕೋಟಿ ರು. ನಂತೆ ವರ್ಷಕ್ಕೆ 12 ಸಾವಿರ ಕೋಟಿ ರು, ಆಗಲಿದೆ.
ಈ ಮೊತ್ತವು, ಸದ್ಯ ಬಿಬಿಎಂಪಿ ರೂಪಿಸುತ್ತಿರುವ ವಾರ್ಷಿಕ ಬಜೆಟ್ ಮೊತ್ತಕ್ಕೆ ಸಮವಾಗಲಿದೆ.
ಪ್ರತಿ ಟನ್ ಕಸಕ್ಕೆ ₹3,000 ಸಾವಿರ ವೆಚ್ಚ:
ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಪ್ರತಿ ಟನ್‌ಗೆ 2,343 ರು. ದರ ನಿಗದಿ ಪಡಿಸಲಾಗಿದೆ. ಜತೆಗೆ ಸಂಸ್ಕರಣೆ ಮತ್ತು ವಿಲೇವಾರಿಗೆ 655 ರು. ನಿಗದಿ ಪಡಿಸಿ ಒಟ್ಟಾರೆ, 1 ಟನ್ ಕಸಕ್ಕೆ 2,998 ರು. ವೆಚ್ಚಕ್ಕೆ ಯೋಜನೆ ರೂಪಿಸಲಾಗಿದೆ. ಸದ್ಯ ವಾರ್ಷಿಕ 480 ಕೋಟಿ ರು. ವೆಚ್ಚದಲ್ಲಿ ಕಸ ವಿಲೇವಾರಿ ಕಾರ್ಯ ನಡೆಸಲಾಗುತ್ತಿದೆ. ಆದರೆ, ಬಿಎಸ್‌ಡಬ್ಲ್ಯೂಎಂಎಲ್ ಇದೀಗ 730 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ. ಮೊದಲ ವರ್ಷವೇ 150 ಕೋಟಿ ರು. ಹೆಚ್ಚಳವಾಗಲಿದೆ.
4 ದಿಕ್ಕಿನಲ್ಲಿ ಉಚಿತ ಭೂಮಿ:
ಸಮಗ್ರ ಘನತ್ಯಾಜ್ಯ ನಿರ್ವಹಣೆ ಗುತ್ತಿಗೆಯನ್ನು 4 ಪ್ಯಾಕೇಜ್‌ಗಳಲ್ಲಿ ನೀಡಲು ಚಿಂತನೆ ನಡೆಸಲಾಗಿದೆ. ಗುತ್ತಿಗೆ ಪಡೆದ ಪ್ರತಿ ಸಂಸ್ಥೆಗೆ ಬಿಬಿಎಂಪಿಯಿಂದ ತಲಾ 100 ಎಕರೆ ಭೂಮಿ ನೀಡಲಾಗುತ್ತದೆ. ವಿವಿಧ ಇಲಾಖೆಯಿಂದ ಭೂಮಿ ಪಡೆದು ಬಿಬಿಎಂಪಿಗೆ ಹಸ್ತಾಂತರ ಮಾಡಲು ಸರ್ಕಾರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಜನರಿಗೆ ಕಸ ವಿಲೇವಾರಿ ಶುಲ್ಕದ ಬರೆ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸುಮಾರು 500 ಕೋಟಿ ರು. ಕಸ ವಿಲೇವಾರಿಗೆಂದು ಬಿಬಿಎಂಪಿಗೆ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬಿಬಿಎಂಪಿ ಭರಿಸಬೇಕಾಗಲಿದೆ. ಈ ಮೊತ್ತ ಸಂಗ್ರಹಿಸುವುದಕ್ಕೆ ಕಸ ವಿಲೇವಾರಿ ಶುಲ್ಕವನ್ನು ಜನರ ಮೇಲೆ ಹೇರಲು ಚಿಂತನೆ ನಡೆಸಲಾಗಿದೆ. ಸಮಗ್ರ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಜಾರಿಗೆ ಬಂದರೆ ಬೆಂಗಳೂರಿಗರು ಮಾಸಿಕ ಕನಿಷ್ಠ 100 ರು. ಘನತ್ಯಾಜ್ಯ ವಿಲೇವಾರಿ ಶುಲ್ಕ ಪಾವತಿಸಬೇಕಾಗುತ್ತದೆ.