ಬಿಬಿಎಂಪಿಯ ಟಿಡಿಆರ್ ಹಗರಣ:ಕೋರ್ಟ್‌ಗೆ ಇ.ಡಿ. ಚಾರ್ಜ್‌ಶೀಟ್‌

KannadaprabhaNewsNetwork |  
Published : Mar 13, 2026, 04:00 AM IST
೧೦ಡಿಎಚಪಿ೧ | Kannada Prabha

ಸಾರಾಂಶ

ಬಿಬಿಎಂಪಿಯ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯ ಟಿಡಿಆರ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಬಿಬಿಎಂಪಿಯ ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು) ಅಥವಾ ಡಿಆರ್‌ಸಿ (ಅಭಿವೃದ್ಧಿ ಹಕ್ಕುಪತ್ರ) ಹಗರಣದ ಸಂಬಂಧ ಬಿಬಿಎಂಪಿ ಅಧಿಕಾರಿಗಳು, ಮೆಸರ್ಸ್ ವ್ಯಾಲ್ಮಾರ್ಕ್‌ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್‌ ಲಿ.ಸೇರಿ 19 ಮಂದಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ (ಪ್ರಾಸಿಕ್ಯೂಶನ್ ಕಂಪ್ಲೇಂಟ್) ಸಲ್ಲಿಸಿದೆ. 2019ರಲ್ಲಿ ಅಂದಿನ ಎಸಿಬಿಯಲ್ಲಿ ದಾಖಲಾದ ಪ್ರಕರಣವನ್ನು ವರ್ಗಾಯಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಅಂದಾಜು 27.68 ಕೋಟಿ ರು. ಅಕ್ರಮ ಹಣ ವರ್ಗಾವಣೆ ಮಾಡಿಕೊಂಡು ಲಾಭ ಪಡೆದುಕೊಂಡಿದ್ದಾರೆ ಎಂಬುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಇ.ಡಿ.ವ್ಯಾಲ್ಮಾರ್ಕ್ ಕಂಪನಿಯ ಕಚೇರಿ ಸೇರಿ ಒಟ್ಟು 9 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ 4 ಕೋಟಿ ರು. ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ಕೆಲ ಸ್ಥಿರಾಸ್ತಿಯನ್ನು ಜಪ್ತಿ ಮಾಡಿತ್ತು. ಅಲ್ಲದೆ, ಕೇವಲ ಒಂದು ಜಮೀನು ಮಾತ್ರವಲ್ಲದೆ, ಬಿಬಿಎಂಪಿಯು ರಸ್ತೆ ಅಗಲೀಕರಣಕ್ಕಾಗಿ ಗುರುತಿಸಿದ್ದ ಅನೇಕ ಪ್ರದೇಶಗಳಲ್ಲಿ ಟಿಡಿಆರ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಸದ್ಯ ಈ ಬಗ್ಗೆಯೂ ಇ.ಡಿ. ತನಿಖೆ ಮುಂದುವರಿಸಿದೆ. ಅಕ್ರಮ ಲಾಭ ಪಡೆದಿರುವುದು ಪತ್ತೆ:

ವಿಆರ್‌ಎಚ್‌ಪಿಎಲ್‌ನ ನಿರ್ದೇಶಕ ರತನ್‌ಲಾಟ್, ಮಧ್ಯವರ್ತಿಗಳಾದ ಕೆ.ಸುರೇಶ್, ಬಿ.ಎಸ್‌.ಸುರೇಂದ್ರನಾಥ್‌, ಕೆ.ಗೌತಮ್ ಟಿಡಿಆರ್ ಅಕ್ರಮದಲ್ಲಿ ಶಾಮೀಲಾಗಿದ್ದು, ಅಕ್ರಮ ಲಾಭ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.

ಬಿಬಿಎಂಪಿ ವ್ಯಾಪ್ತಿಯ ಕೌದೇನಹಳ್ಳಿಯ ಸರ್ವೆ ನಂ. 132ರಲ್ಲಿದ್ದ ಜಮೀನು ಈಗಾಗಲೇ ರೆವಿನ್ಯೂ ಲೇಔಟ್ ಆಗಿ ಪರಿವರ್ತನೆಯಾಗಿ, 3ನೇ ವ್ಯಕ್ತಿಗಳಿಗೆ ಮಾರಾಟವಾಗಿತ್ತು. ಆದರೂ, ಈ ಭೂಮಿಯನ್ನು ಕೃಷಿ ಭೂಮಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ರೇವಣ್ಣ ಎಂಬುವರ ವಾರಸುದಾರರ ಹೆಸರಿಗೆ ಆರ್‌ಟಿಸಿ ಬದಲಾಯಿಸಲಾಯಿತು. ಇಂದಿರಾನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ಒಪ್ಪಂದಗಳು ಮತ್ತು ಜನರಲ್ ಪವರ್ ಆಫ್ ಅಟಾರ್ನಿಗಳನ್ನು ಸೃಷ್ಟಿಸಿ ನೋಂದಾಯಿಸಲಾಯಿತು. ಆ ಜಮೀನಿನ ಮೇಲೆ ಯಾವುದೇ ಹಕ್ಕು ಇಲ್ಲದಿದ್ದರೂ, ಬಿಬಿಎಂಪಿಯಿಂದ ಟಿಡಿಆರ್ ಸೌಲಭ್ಯ ಪಡೆಯಲು ಈ ದಾಖಲೆಗಳನ್ನು ಬಳಸಲಾಗಿತ್ತು ಎಂದು ಇ.ಡಿ ತಿಳಿಸಿದೆ.

ದಾಖಲೆಗಳನ್ನು ಪರಿಶೀಲಿಸದೆ ಸಹಿ:

ಟಿಡಿಆರ್ ಮೌಲ್ಯವನ್ನು ಹೆಚ್ಚಿಸಲು, ಖಾಲಿ ಇರುವ ಜಮೀನಿನಲ್ಲಿ ಕಟ್ಟಡಗಳಿವೆ ಎಂದು ಸುಳ್ಳು ವರದಿ ಸೃಷ್ಟಿಸಲಾಯಿತು. ಪಕ್ಕದ ಸರ್ವೇ ನಂಬರ್‌ನಲ್ಲಿದ್ದ ಕಟ್ಟಡವೊಂದನ್ನು ಈ ವಿವಾದಿತ ಜಮೀನಿನಲ್ಲಿದೆ ಎಂದು ತೋರಿಸಿ, ಸುಮಾರು 1.26 ಕೋಟಿ ರು. ಮೌಲ್ಯದ ಕಟ್ಟಡಕ್ಕೆ ಅಕ್ರಮವಾಗಿ 10,672.14 ಚ.ಮೀ.ಗಳಷ್ಟು ಅಭಿವೃದ್ಧಿ ಹಕ್ಕುಗಳ ಪ್ರಮಾಣ ಪತ್ರ ಪಡೆಯಲಾಯಿತು. ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸದೆ, ದಾಖಲೆಗಳನ್ನು ಪರಿಶೀಲಿಸದೆ ಸುಳ್ಳು ಮೌಲ್ಯಮಾಪನಕ್ಕೆ ಸಹಿ ಹಾಕಿ ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇ.ಡಿ. ತಿಳಿಸಿದೆ.

ಟಿಡಿಆರ್‌ ಎಂದರೇನು?

ರಸ್ತೆ ಅಗಲೀಕರಣ, ಉದ್ಯಾನವನ ಅಥವಾ ಸಾರ್ವಜನಿಕ ಉದ್ದೇಶಗಳಿಗಾಗಿ ಸರ್ಕಾರವು ಖಾಸಗಿ ವ್ಯಕ್ತಿಗಳ ಜಮೀನನ್ನು ಸ್ವಾಧೀನಪಡಿಸಿಕೊಂಡಾಗ, ಅದಕ್ಕೆ ಪ್ರತಿಯಾಗಿ ಹಣದ ಬದಲು ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರವನ್ನು ಬಳಸಿಕೊಂಡು ಭೂಮಾಲೀಕರು ತಮ್ಮ ಉಳಿದ ಜಮೀನಿನಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಬಹುದು ಅಥವಾ ಅದನ್ನು ಬೇರೆಯವರಿಗೆ ಮಾರಾಟ ಮಾಡಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!