ತಿಪಟೂರು: ಕರ್ನಾಟಕ ಯೋಗ ವೆಲ್‌ನೆಸ್ ಟ್ರಸ್ಟ್ ವತಿಯಿಂದ ೯ ಭಾನುವಾರ ನಗರದ ಎಸ್.ಎನ್.ಎಸ್. ಕನ್ವೆನ್ಷನ್ ಹಾಲ್‌ನಲ್ಲಿ ರಾಜ್ಯಮಟ್ಟದ ಪ್ರಥಮ ಯೋಗ ಸ್ಪರ್ಧೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷೆ ರೇಖಾ ಜಿ.ಎ. ತಿಳಿಸಿದರು.

ನಗರದ ಕೌಸ್ತುಭ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಾದ್ಯಂತ ಸುಮಾರು ೮೦೦ಕ್ಕೂ ಹೆಚ್ಚು ಯೋಗಪಟುಗಳು ಸ್ಪರ್ಧಾವಳಿಯಲ್ಲಿ ಭಾಗವಹಿಸಲಿದ್ದು, ವಯೋಮಿತಿಗೆ ಅನುಗುಣವಾಗಿ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಒಟ್ಟು ೧೮ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಯೋಗ ವೆಲ್‌ನೆಸ್ ಟ್ರಸ್ಟ್ ಕಾರ್ಯದರ್ಶಿ ಕೀರ್ತನ ಕೆ.ಸಿ. ಮಾತನಾಡಿ ಯೋಗಸ್ಪರ್ಧೆ ಬೆಳಿಗ್ಗೆ ೮ಗಂಟೆಯಿಂದ ಸಂಜೆ ೬ಗಂಟೆಯವರೆಗೆ ಯೋಗ ಸ್ಪರ್ಧೆ ನಡೆಯಲಿದ್ದು ಸಂಜೆ ೬.೩೦ಕ್ಕೆ ೮ ವಿಭಾಗಗಳಲ್ಲಿ ಚಾಂಪಿಯನ್ ಶಿಪ್‌ ನಡೆಯಲಿದೆ. ರಾಜ್ಯದೆಲ್ಲೆಡೆಯಿಂದ ಸುಮಾರು ೪೦ಕ್ಕೂ ಹೆಚ್ಚು ಯೋಗ ತೀರ್ಪುಗಾರರು, ನೂರಾರು ಸ್ವಯಂಸೇವಕರು ಭಾಗವಹಿಸಲಿದ್ದು ವಿಜೇತರಿಗೆ ಚಾಂಪಿಯನ್ ಟ್ರೋಫಿ ಹಾಗೂ ಪದಕ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿಪತ್ರ ಹಾಗೂ ಬಹುಮಾನ ನೀಡಲಾಗುವುದು. ಆನ್‌ಲೈನ್ ಮೂಲಕ ಸ್ಪರ್ಧಾಳುಗಳ ನೊಂದಣಿ ಪ್ರಾರಂಭವಾಗಿದ್ದು ಸ್ಪರ್ಧೆಯ ದಿನ ಸ್ಥಳದಲ್ಲಿಯೇ ನೊಂದಣಿ ಮಾಡಲು ಅವಕಾಶವಿರುತ್ತದೆ ಎಂದರು..೯ರಂದು ಬೆಳಿಗ್ಗೆ ೯ಕ್ಕೆ ಶಾಸಕ ಕೆ.ಷಡಕ್ಷರಿ ಯೋಗ ಸ್ಪರ್ಧೆಯನ್ನು ಉದ್ಘಾಟಿಸಲಿದ್ದು ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಭದೇಶಿಕೇಂದ್ರ ಸ್ವಾಮೀಜಿಗಳ ದಿವ್ಯನೇತೃತ್ವ ಹಾಗೂ ವೈದ್ಯ ಡಾ.ಜಿ.ಎಸ್.ಶ್ರೀಧರ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ. ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮುಂತಾದವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.