ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುನೀವು ಬೆಂಗಳೂರಿನಲ್ಲಿ ವಾಣಿಜ್ಯ ಕಟ್ಟಡ ಹೊಂದಿದ್ದೀರಾ? ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಿದ್ದರೆ ಸೋಮವಾರದಿಂದ ನಿಮ್ಮ ಮನೆಗೆ ಬಿಬಿಎಂಪಿ ಅಧಿಕಾರಿಗಳು ಬಂದು ಕಾರು, ಚಿನ್ನ ಇತ್ಯಾದಿಗಳನ್ನು ಜಪ್ತಿ ಮಾಡಲಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳ ಆಸ್ತಿ ಮಾಲಿಕರ ಕಾರು ಸೇರಿದಂತೆ ಚರಾಸ್ತಿ ಜಪ್ತಿ ಮಾಡಿ ಹರಾಜು ಹಾಕಲು ಬಿಬಿಎಂಪಿ ಕಾರ್ಯಯೋಜನೆ ರೂಪಿಸಿದ್ದು, ಡಿ.18 (ಸೋಮವಾರ) ಜಪ್ತಿ ಆರಂಭವಾಗಲಿದೆ ಎಂದು ಬಿಬಿಎಂಪಿ ಉನ್ನತ ಮೂಲಗಳು ತಿಳಿಸಿವೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಅಧಿಕ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಸಾಕಷ್ಟು ಪ್ರಮಾಣ ವಸತಿ ಮತ್ತು ವಾಣಿಜ್ಯ ವ್ಯಾಪಾರ ನಡೆಸುವ ಆಸ್ತಿಗಳಿದ್ದರೂ ವಾರ್ಷಿಕವಾಗಿ ಆಸ್ತಿ ತೆರಿಗೆ ಮೂಲಕ ಸಂಗ್ರಹ ಆಗುತ್ತಿರುವ ಮೊತ್ತ ನಾಲ್ಕು ಸಾವಿರ ಕೋಟಿ ರುಪಾಯಿ ದಾಟುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪ್ರಮಾಣ ಹೆಚ್ಚಳ ಮಾಡುವ ಸ್ಥಿತಿಯಲ್ಲಿಯೂ ಇಲ್ಲ. ಆದರೆ, ವರ್ಷದಿಂದ ವರ್ಷಕ್ಕೆ ನಗರದ ಜನರಿಗೆ ಒದಗಿಸಬೇಕಾದ ಮೂಲಸೌಕರ್ಯದ ವೆಚ್ಚ ಮಾತ್ರ ಹೆಚ್ಚಾಗುತ್ತಿದೆ. ಹೀಗಾಗಿ, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದ ಬಾಕಿ ವಸೂಲಿಗೆ ಬಿಬಿಎಂಪಿ ಕಂದಾಯ ವಿಭಾಗ ಇದೀಗ ಮುಂದಾಗಿದೆ.
ಈ ನಿಟ್ಟಿನಲ್ಲಿ ಸೋಮವಾರದಿಂದ ವಲಯವಾರು ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಕಾರು ಸೇರಿದಂತೆ ಚರಾಸ್ತಿ ಜಪ್ತಿ ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಎಲ್ಲಾ ವಲಯ ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.₹500 ಕೋಟಿಗೂ ಹೆಚ್ಚು ಬಾಕಿ:
ನಗರದಲ್ಲಿ ಸುಮಾರು 5ರಿಂದ 6 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಮಾಲೀಕರಿಂದ ಬಿಬಿಎಂಪಿಗೆ ಸುಮಾರು ₹500 ಕೋಟಿಯಿಂದ ₹600 ಕೋಟಿ ತೆರಿಗೆ ವಸೂಲಿ ಆಗಬೇಕಿದೆ. ಪ್ರಮುಖವಾಗಿ ಹಲವು ವರ್ಷದಿಂದ ಹಾಗೂ ಭಾರೀ ಪ್ರಮಾಣದಲ್ಲಿ ವಾಣಿಜ್ಯ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವುದಕ್ಕೆ ನಿರ್ದೇಶನ ನೀಡಲಾಗಿದೆ.----ಜಪ್ತಿ ಮಾಡಿದ ವಸ್ತುಗಳು ಹರಾಜು
ಚರಾಸ್ತಿಗಳನ್ನು ಜಪ್ತಿ ಮಾಡಿದ ಬಳಿಕ ಅವುಗಳನ್ನು ವಲಯ ಕಚೇರಿಯಲ್ಲಿ ಶೇಖರಣೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಜತೆಗೆ, ಗೋದಾಮು ಪಡೆಯುವುದಕ್ಕೂ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎರಡು ವಾರ ಮಾಲೀಕರಿಗೆ ಅವಕಾಶ ನೀಡಲಾಗುತ್ತದೆ. ಎರಡು ವಾರದ ಬಳಿಕವೂ ಬಾಕಿ ಪಾವತಿ ಮಾಡದಿದ್ದರೆ, ಜಪ್ತಿ ಮಾಡಿದ ಚರಾಸ್ತಿಗಳನ್ನು ಹರಾಜು ಅಥವಾ ಮಾರಾಟ ಮಾಡಿ ಬಂದ ಹಣದಲ್ಲಿ ಬಾಕಿ ಮೊತ್ತವನ್ನು ಜಮಾ ಮಾಡಿಕೊಳ್ಳಲಾಗುವುದು. ಒಂದು ವೇಳೆ ಆಸ್ತಿ ತೆರಿಗೆ ಇನ್ನೂ ಬಾಕಿ ಉಳಿದರೆ ಮಾಲೀಕನ ಬೇರೆ ಚರಾಸ್ತಿ ಅಥವಾ ಸ್ಥಿರಾಸ್ತಿ ಜಪ್ತಿಗೆ ಕ್ರಮ ವಹಿಸಲಾಗುತ್ತದೆ ಎಂದು ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.-----ವಾಣಿಜ್ಯ ಕಟ್ಟಡ ಸೀಜ್ ಶುರು
ಈಗಾಗಲೇ ನಗರದಲ್ಲಿ ಅಧಿಕ ಪ್ರಮಾಣದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಾಣಿಜ್ಯ ಕಟ್ಟಡಗಳಿಗೆ ಕಂದಾಯ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ನೋಟಿಸ್‌ಗೆ ಪ್ರತ್ಯುತ್ತರ ನೀಡದೇ, ಬಾಕಿ ಪಾವತಿಸದ ವಾಣಿಜ್ಯ ಕಟ್ಟಡಗಳನ್ನು ಸೀಜ್ ಮಾಡುವ ಕಾರ್ಯವನ್ನು ಬಿಬಿಎಂಪಿ ಈಗಾಗಲೇ ಆರಂಭಿಸಿದೆ. ಎರಡು ವಾರ ಅವಕಾಶ ನೀಡಲಾಗುತ್ತದೆ. ಬಳಿಕವೂ ಬಾಕಿ ಪಾವತಿಸದಿದ್ದರೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.---------ಬ್ಯಾಂಕ್ ಖಾತೆ
ಸೀಜ್ ನೆನೆಗುದಿಗೆನಗರದಲ್ಲಿ ಭಾರೀ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಬ್ಯಾಂಕ್ ಖಾತೆ ಸೀಜ್ ಮಾಡುವುದು ಹಾಗೂ ಬಾಕಿದಾರರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಯೊಂದಿಗೆ ಜೋಡೆಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈ ಪ್ರಕ್ರಿಯೆಯಿಂದ ಒಂದೇ ಒಂದು ರೂಪಾಯಿಯೂ ಬಿಬಿಎಂಪಿಯ ಕಂದಾಯ ವಿಭಾಗ ವಸೂಲಿ ಮಾಡಿಲ್ಲ.ಸ್ಥಿರಾಸ್ತಿ ಕೂಡ ಜಪ್ತಿ ಮಾಡಲು ಅವಕಾಶಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಚಿರಾಸ್ತಿ ಹಾಗೂ ಸ್ಥಿರಾಸ್ತಿ ಎರಡನ್ನೂ ಜಪ್ತಿ ಮಾಡುವುದಕ್ಕೆ ಬಿಬಿಎಂಪಿಯ ಕಾಯ್ದೆಯಲ್ಲಿ ಅವಕಾಶವಿದೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ------ಬಿಡಿಸಿಕೊಳ್ಳದಿದ್ದರೆ ಹರಾಜುಜಪ್ತಿ ಮಾಡಿದ ಚರಾಸ್ತಿ ಬಿಡಿಸಿಕೊಳ್ಳಲು ಎರಡು ವಾರ ಅವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ಬಾಕಿ ತೆರಿಗೆ ಪಾವತಿಸಿ ಆಸ್ತಿ ಬಿಡಿಸಿಕೊಳ್ಳದಿದ್ದರೆ ಅದನ್ನು ಹರಾಜು ಮಾಡಲಾಗುತ್ತದೆ.