)
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಪರಿಷ್ಕೃತ ಮಾಸ್ಟರ್ ಪ್ಲಾನ್ ಬೆಂಗಳೂರು ಹೊರ ವಲಯದ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶವನ್ನು ಪರಿಷ್ಕರಿಸಿ ಘೋಷಿಸಲು ಉದ್ದೇಶಿಸಿದೆ. ನೂತನವಾಗಿ ರಚನೆಯಾಗಿರುವ ‘ಗ್ರೇಟರ್ ಬೆಂಗಳೂರು ಅಥಾರಿಟಿ’(ಜಿಬಿಎ) ನಗರದ ಒಳಭಾಗದ 712 ಚದರ ಕಿಲೋಮೀಟರ್ ಜವಾಬ್ದಾರಿ ವಹಿಸಿಕೊಂಡಿದೆ. ಅಂತೆಯೇ ಬಿಡಿಎ ತನ್ನ ವ್ಯಾಪ್ತಿಯ ಸುಮಾರು 500 ಚದರ ಕಿಲೋಮೀಟರ್ ಪ್ರದೇಶ ಮತ್ತು 242 ಗ್ರಾಮಗಳನ್ನು ಒಳಗೊಂಡಂತೆ ಮಹಾಯೋಜನೆಯ ನೀಲನಕ್ಷೆ ಸಿದ್ಧಪಡಿಸುತ್ತಿದೆ.
ಬೆಂಗಳೂರು ಮಹಾನಗರ ಅವ್ಯವಸ್ಥಿತವಾಗಿ ಬೆಳೆಯದೇ ಶಿಸ್ತುಬದ್ಧವಾಗಿ ಅಭಿವೃದ್ಧಿ ಸಾಧಿಸಲು ಈ ಯೋಜನೆ ಪೂರಕವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ನಾಗರಿಕ ಹಿತರಕ್ಷಣಾ ವೇದಿಕೆಗಳು, ಭೂಮಾಲೀಕರು ಹಾಗೂ ತಜ್ಞರು ಈ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್ ಕುರಿತು ಸಲಹೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಏಪ್ರಿಲ್ 6 ರಿಂದ 60 ದಿನಗಳ ಅವಕಾಶ ಕಲ್ಪಿಸಲಾಗಿದೆ. ನಾಗರಿಕರು ಬಿಡಿಎ ‘ನಗರ ಯೋಜನಾ ಸದಸ್ಯರಿಗೆ’ ಲಿಖಿತವಾಗಿ ಮಾಹಿತಿ ನೀಡಬಹುದು. ಭೂಬಳಕೆ , ವಸತಿ ಸಮುಚ್ಚಯಗಳು, ವಾಣಿಜ್ಯ ವಲಯಗಳು ಮತ್ತು ರಸ್ತೆ ಸಂಪರ್ಕದ ಕುರಿತಾದ ಸಾರ್ವಜನಿಕರ ದೂರು-ದುಮ್ಮಾನಗಳನ್ನು ಪರಿಶೀಲಿಸಿ ಅಂತಿಮ ವರದಿಯಲ್ಲಿ ಸೇರಿಸಲಾಗುವುದು.ಈ ಯೋಜನೆ ವ್ಯಾಪ್ತಿಯಲ್ಲಿ ಆನೇಕಲ್ ತಾಲೂಕಿನ ಅತ್ತಿಬೆಲೆ, ಜಿಗಣಿ, ಹೆಸರುಘಟ್ಟ, ಯಶವಂತಪುರ, ಜಾಲ, ಯಲಹಂಕ, ಕೆಂಗೇರಿ, ತಾವರೆಕೆರೆ ಹೋಬಳಿಗಳು, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ, ವರ್ತೂರು ಹೋಬಳಿಗಳ ಒಟ್ಟು 242 ಗ್ರಾಮಗಳು ಮಹಾಯೋಜನೆಗೆ ಒಳಪಡಲಿವೆ. ಈ ಗ್ರಾಮಗಳಲ್ಲಿ ಬಹುತೇಕ ಪೂರ್ಣ ಗ್ರಾಮ ಮತ್ತು ಕೆಲವು ಗ್ರಾಮಗಳ ಭಾಗಶಃ ಪ್ರದೇಶ ಯೋಜನೆ ವ್ಯಾಪ್ತಿಗೆ ಬರಲಿದೆ.
2041ರ ಈ ಯೋಜನೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾಗಾಗಿ ಹೊರವರ್ತುಲ ರಸ್ತೆ ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿ ಮಾಡಲು ಯೋಜಿಸಲಾಗುತ್ತಿದೆ. ಮೆಟ್ರೋ ಕಾರಿಡಾರ್‌ಗಳ ಸಮೀಪದ ಜಮೀನುಗಳ ಅಭಿವೃದ್ಧಿ ಹಾಗೂ ಕಂದಾಯ ಭೂಮಿಯನ್ನು ಯೋಜನಾಬದ್ಧವಾಗಿ ವಸತಿ ಪ್ರದೇಶಗಳನ್ನಾಗಿ ಮಾರ್ಪಡಿಸುವ ಕುರಿತು ಬಿಡಿಎ ಚಿಂತನೆ ನಡೆಸಿದೆ.