ಬಿಡಿಸಿಸಿ ಬ್ಯಾಂಕ್‌ ಚುನಾವಣೆ: ಕಣದಲ್ಲಿ ಘಟಾನುಘಟಿಗಳು

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ನ ಆಡಳಿತ ಮಂಡಳಿಯ ಮೇಲೆ ರಾಜಕಾರಣಿಗಳು ಕಣ್ಣಿಟ್ಟಿದ್ದು, ಈಗ ಘಟಾನುಘಟಿಗಳು ಚುನಾವಣೆ ಅಖಾಡಕ್ಕೆ ಇಳಿದಿದ್ದು, ಅ. 15ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕೃಷ್ಣ ಎನ್‌. ಲಮಾಣಿ ಕನ್ನಡಪ್ರಭ ವಾರ್ತೆ ಹೊಸಪೇಟೆ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್‌ನ ಆಡಳಿತ ಮಂಡಳಿಯ ಮೇಲೆ ರಾಜಕಾರಣಿಗಳು ಕಣ್ಣಿಟ್ಟಿದ್ದು, ಈಗ ಘಟಾನುಘಟಿಗಳು ಚುನಾವಣೆ ಅಖಾಡಕ್ಕೆ ಇಳಿದಿದ್ದು, ಅ. 15ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಡಿಸಿಸಿ ಬ್ಯಾಂಕ್‌ನ 14 ನಿರ್ದೇಶಕರ ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಈಗ 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಅ. 15ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆಯಲಿದೆ. ಹಾಗಾಗಿ ಈ ಚುನಾವಣೆ ಭಾರೀ ಕುತೂಹಲಕ್ಕೆಡೆ ಮಾಡಿದೆ. ಅಖಾಡದಲ್ಲಿ ಘಟಾನುಘಟಿಗಳು: ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ, ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ, ಮಾಜಿ ಸಚಿವ ಆನಂದ ಸಿಂಗ್‌ರ ಅಳಿಯ ಸಂದೀಪ್‌ ಸಿಂಗ್‌ ಮತ್ತು ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ. ಅಣ್ಣಪ್ಪ ಕೂಡ ಅಖಾಡಕ್ಕಿಳಿದಿದ್ದಾರೆ. ಅಖಂಡ ಜಿಲ್ಲೆಯ ರಾಜಕಾರಣಿಗಳು ಈ ಬಾರಿ ಕಣದಲ್ಲಿದ್ದು, ಈ ಚುನಾವಣೆ ಈಗ ಸಹಕಾರ ರಂಗದಲ್ಲಿ ರಂಗೇರಿಸಿದೆ. ಈ ಹಿಂದೆ ಮಾಜಿ ಸಚಿವ ಆನಂದ ಸಿಂಗ್‌ ಅವರು ಈ ಬ್ಯಾಂಕ್‌ನ ನಿರ್ದೇಶಕರಾಗಿದ್ದರು. ಇವರ ಕಾಲದಲ್ಲಿ ಈ ಬ್ಯಾಂಕ್‌ ಶತಮಾನೋತ್ಸವ ಸಮಾರಂಭವನ್ನಾಚರಿಸಿಕೊಂಡಿದೆ. ಈ ಹಿಂದೆ ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಹಾಗೂ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯನವರು ಕೂಡ ಈ ಬ್ಯಾಂಕ್‌ನ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ರಾಜಕಾರಣಿಗಳ ದಂಡೇ ಕಣದಲ್ಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಚುನಾವಣೆ ಅವಳಿ ಜಿಲ್ಲೆಯ ಗಮನ ಸೆಳೆದಿದೆ. ಪಿಟಿಪಿ ಎದುರಾಳಿ ಐಗೋಳ್‌: ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೂವಿನಹಡಗಲಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅಖಾಡದಲ್ಲಿದ್ದಾರೆ. ಈ ಸಂಘದಲ್ಲಿ 19 ಜನ ಮತದಾರರಿದ್ದು, ಒಂದು ಕಾಲದಲ್ಲಿ ಅವರ ಆಪ್ತ ಬಳಗದಲ್ಲಿದ್ದ ಐಗೋಳ್‌ ಚಿದಾನಂದ್‌ ಅವರು ಎದುರಾಳಿಯಾಗಿದ್ದಾರೆ. ಹಾಗಾಗಿ ಈ ಕ್ಷೇತ್ರ ಕುತೂಹಲಕ್ಕೆಡೆ ಮಾಡಿದೆ. ಕೆಎಂಎಫ್‌ ಅಧ್ಯಕ್ಷ ಕಣಕ್ಕೆ: ಹಗರಿಬೊಮ್ಮನಹಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ ಕಣದಲ್ಲಿದ್ದಾರೆ. ಒಂದು ಕಾಲದಲ್ಲಿ ಅವರ ಆಪ್ತ ಬಳಗದಲ್ಲಿದ್ದ ಚಂದ್ರಶೇಖರ್ ಟಿ. ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 15 ಜನ ಮತದಾರರಿದ್ದಾರೆ. ಶಾಸಕಿ ಲತಾ ಕಣದಲ್ಲಿ: ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಹರಪನಹಳ್ಳಿ ಶಾಸಕಿ ಎಂ.ಪಿ.‌ ಲತಾ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಗಂಗಾಧರ್‌, ಪಿ. ಕವಿತಾ ಕಣದಲ್ಲಿದ್ದಾರೆ. ತೀವ್ರ ಕುತೂಹಲಕ್ಕೆಡೆ ಮಾಡಿರುವ ಈ ಕ್ಷೇತ್ರದಲ್ಲಿ 97 ಜನ ಮತದಾರರಿದ್ದಾರೆ. ಸಿರುಗುಪ್ಪದಿಂದ ಮಾಜಿ ಶಾಸಕ: ಸಿರುಗುಪ್ಪ ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಿಂದ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಕಣದಲ್ಲಿದ್ದಾರೆ. ಅವರ ವಿರುದ್ದ ಸಹಕಾರ ಧುರೀಣ ಚೊಕ್ಕಬಸವನಗೌಡ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 29 ಜನ ಮತದಾರರಿದ್ದಾರೆ. ಆನಂದ ಸಿಂಗ್‌ ಅಳಿಯ ಕಣದಲ್ಲಿ: ಮಾಜಿ ಸಚಿವ ಆನಂದ ಸಿಂಗ್‌ರ ಅಳಿಯ ಸಂದೀಪ್‌ ಸಿಂಗ್‌ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಇವರ ಎದುರಾಳಿಯಾಗಿ ಹಗರಿಬೊಮ್ಮನಹಳ್ಳಿಯ ಮೃತ್ಯುಂಜಯ ಬಾದಾಮಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಎಂಟು ಜನ ಮತದಾರರಿದ್ದಾರೆ. ಸಂಸದರ ಪುತ್ರ ಸ್ಪರ್ಧೆ: ಸಂಸದ ವೈ. ದೇವೇಂದ್ರಪ್ಪರ ಪುತ್ರ ವೈ. ಅಣ್ಣಪ್ಪ ಕೂಡ ಹರಪನಹಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಣದಲ್ಲಿದ್ದಾರೆ. ಇವರ ವಿರುದ್ಧ ಬಿ.ಕೆ. ಪ್ರಕಾಶ ಕಣದಲ್ಲಿದ್ದು, 23 ಮತಗಳಿವೆ. ಕಂಪ್ಲಿ ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಿಂದ ಮೂವರು ನಾಮಪತ್ರ ಸಲ್ಲಿಸಿದ್ದಾರೆ. ಗುಬಾಜಿ ಪಂಪಾಪತಿ, ಪಿ.‌ ಮೂಕಯ್ಯಸ್ವಾಮಿ, ಎಸ್. ಮಾರೇಶ್ ಕಣದಲ್ಲಿದ್ದು, ಎಂಟು ಜನ ಮತದಾರರಿದ್ದಾರೆ. ಕೊಟ್ಟೂರು ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹತ್ತು ಜನ ಮತದಾರರಿದ್ದು, ಐ. ದಾರುಕೇಶ್, ಕೆ.‌ ಭರಮರೆಡ್ಡಿ ಕಣದಲ್ಲಿದ್ದಾರೆ. ಕುರುಗೋಡು ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಐವರು ಮತದಾರರಿದ್ದು, ಎನ್.‌ ಮಂಜುನಾಥ, ಹುಲುಗಪ್ಪ ನಾಯಕರ ಕಣದಲ್ಲಿದ್ದಾರೆ. ಬಳ್ಳಾರಿ ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಿಂದ ಬಿ. ನವೀನ್ ಕುಮಾರ ರೆಡ್ಡಿ , ಡಿ.‌ ಬೋಗಾರೆಡ್ಡಿ ಕಣದಲ್ಲಿದ್ದು, ೧೭ ಜನ ಮತದಾರರಿದ್ದಾರೆ. ಹೊಸಪೇಟೆ ತಾಲೂಕು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದಿಂದ ಎಲ್.ಎಸ್. ಆನಂದ ಮತ್ತು ಅನಿಲ್ ಜೋಶಿ ಕಣದಲ್ಲಿದ್ದು, 17 ಜನ ಮತದಾರರಿದ್ದಾರೆ. ಅರ್ಬನ್ ಬ್ಯಾಂಕ್ ಮತ್ತು ಪತ್ತಿನ ಸಹಕಾರ ಸಂಘದಿಂದ ಪ್ರಿಯಾಂಕಾ ಜೈನ್, ಜೆ.‌ ಮಂಜುನಾಥ, ಪಿ.‌ ವಿಶ್ವನಾಥ, ಕೊಳೂರು ಮಲ್ಲಿಕಾರ್ಜುನ ಗೌಡ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 34 ಜನ ಮತದಾರರಿದ್ದಾರೆ. 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 12 ಬೂತ್‌ಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತ ಎಣಿಕೆ ಹಾಗೂ ಚುನಾವಣೆಗೆ ಸಿಬ್ಬಂದಿ ಕೂಡ ನಿಯೋಜನೆ ಮಾಡಲಾಗಿದೆ. ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆ: ಕೂಡ್ಲಿಗಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕೆ.‌ ತಿಪ್ಪೇಸ್ವಾಮಿ ಮತ್ತು ಸಂಡೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಜೆ.ಎಂ.‌ ಶಿವಪ್ರಸಾದ್ ಅವಿರೋಧ ಆಯ್ಕೆ ಆಗಿದ್ದಾರೆ. ಈ ಕ್ಷೇತ್ರಗಳಿಗೆ ಏಕೈಕ ನಾಮಪತ್ರ ಸಲ್ಲಿಕೆಯಾಗಿವೆ. ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಚುನಾವಣೆಗೆ ಕಣದಲ್ಲಿರುವೆ. ಬಿಡಿಸಿಸಿ ಬ್ಯಾಂಕ್‌ ರೈತರ ಬ್ಯಾಂಕ್‌ ಆಗಿದೆ. ಕೃಷಿಕರ ಸೇವೆ ಸಲ್ಲಿಸಲು ಈ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವೆ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು. ಬಿಡಿಸಿಸಿ ಬ್ಯಾಂಕ್‌ ರೈತರ ಬ್ಯಾಂಕ್‌ ಆಗಿದೆ. ಕೃಷಿಕರ ಪರವಾಗಿ ಕೆಲಸ ಮಾಡಲು ಇದೊಂದು ಅವಕಾಶ. ನಾನು ಕೂಡ ರೈತ ಕುಟುಂಬದಿಂದ ಬಂದಿರುವೆ. ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದು ಕೆಎಂಎಫ್‌ ಅಧ್ಯಕ್ಷ ಎಸ್‌. ಭೀಮಾನಾಯ್ಕ ಹೇಳಿದರು. ಸಹಕಾರ ರಂಗಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಸಹಕಾರಿಗಳ ಒತ್ತಾಸೆ ಮೇರೆಗೆ ನಾನು ಕಣಕ್ಕಿಳಿದಿರುವೆ. ಈ ಹಿಂದೆ ನನ್ನ ಸಹೋದರ ಎಂ.ಪಿ. ರವೀಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಎಂದು ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ತಿಳಿಸಿದರು.

Share this article