ಬಿಡಿಸಿಸಿ ಬ್ಯಾಂಕ್‌: ಕತ್ತಿ, ಜೊಲ್ಲೆಗೆ ಗೆಲುವು

KannadaprabhaNewsNetwork |  
Published : Nov 03, 2025, 03:15 AM IST
ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹರ್ಕಾರಿ ಬ್ಯಾಂಕ್(ಬಿಡಿಸಿಸಿ) ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟಿಸಲಾಗಿದೆ | Kannada Prabha

ಸಾರಾಂಶ

ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೋರ್ಟ್ ವ್ಯಾಜ್ಯದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ನಾಲ್ಕು ಕ್ಷೇತ್ರಗಳ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ನಿರೀಕ್ಷೆಯಂತೆ ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ, ನಾನಾಸಾಹೇಬ ಪಾಟೀಲ ಮತ್ತು ಮಹಾಂತೇಶ ದೊಡ್ಡಗೌಡರ ಗೆಲವು ಈಗ ಅಧಿಕೃತವಾಗಿದೆ.

ಬಿಡಿಸಿಸಿ ಬ್ಯಾಂಕಿನ 16 ಕ್ಷೇತ್ರಗಳ ಪೈಕಿ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿತ್ತು. ಉಳಿದ 7 ಕ್ಷೇತ್ರಗಳಿಗೆ ಅ.19ರಂದು ಚುನಾವಣೆ ನಡೆದಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಕೋರ್ಟ್‌ನಲ್ಲಿ ವಿಚಾರಣೆಯಿದ್ದ ಹಿನ್ನೆಲೆ ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ಮತ್ತು ಹುಕ್ಕೇರಿ ಕ್ಷೇತ್ರಗಳಿಗೆ ಮತದಾನಕ್ಕೆ ಮಾತ್ರ ಕೋರ್ಟ್ ಅವಕಾಶ ನೀಡಿತ್ತು. ಸದ್ಯ ಕೋರ್ಟ್‌ನಿಂದ ಅನುಮತಿ ಸಿಕ್ಕಿರುವ ಹಿನ್ನೆಲೆ ಭಾನುವಾರ ಚುನಾವಣಾಧಿಕಾರಿ ಶ್ರವಣ ನಾಯ್ಕ ನಾಲ್ಕು ಕ್ಷೇತ್ರಗಳ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಿದರು.

ಹುಕ್ಕೇರಿ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ (59 ಮತ), ನಿಪ್ಪಾಣಿಯಿಂದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ (71ಮತ), ಚನ್ನಮ್ಮನ ಕಿತ್ತೂರಿನಿಂದ ನಾನಾಸಾಹೇಬ ಪಾಟೀಲ (17) ಹಾಗೂ ಬೈಲಹೊಂಗದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ (54) ಗೆಲವು ಸಾಧಿಸಿದ್ದಾರೆ. ಈ ನಾಲ್ವರ ವಿರುದ್ಧ ಸೋತವರು ಕ್ರಮವಾಗಿ ರಾಜೇಂದ್ರ ಪಾಟೀಲ 32, ಉತ್ತಮ ಪಾಟೀಲ 48, ವಿಕ್ರಮ ಇನಾಮದಾರ 15 ಹಾಗೂ ವಿಶ್ವನಾಥ ಪಾಟೀಲ 21 ಮತಗಳನ್ನು ಪಡೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ನ್ಯಾಯಾಲಯದ ಸೂಚನೆ ಪಾಲಿಸಿ ನಾಲ್ಕು ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿದೆ. ಆದರೆ ನಿಪ್ಪಾಣಿಯ 7 ಮತಗಳನ್ನು ಎಣಿಕೆ ಮಾಡದಂತೆ ಸೂಚಿಸಿತ್ತು. ಅದರ ಹೊರತಾಗಿ ಅ.19ರಂದು ಮತದಾನ ಆಗಿರುವಂತೆ ತೀರ್ಪು ನೀಡಬಹುದೆಂದು ಕೋರ್ಟ್ ನಿರ್ದೇಶನ ನೀಡಿತ್ತು. ಹೀಗಾಗಿ, ಆ 7 ಮತಗಳನ್ನು ಹೊರತುಪಡಿಸಿ ನಿಪ್ಪಾಣಿ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

ವಿಜೇತ ಅಭ್ಯರ್ಥಿ ನಾನಾಸಾಹೇಬ ಪಾಟೀಲ ಮಾತನಾಡಿ, ಒಟ್ಟು 32 ಮತಗಳ ಪೈಕಿ ನನಗೆ 17 ಮತ ಬಂದಿವೆ. ಮೊದಲು ನಮ್ಮ ಬಳಿ ಹತ್ತು ಮತದಾರರು ಮಾತ್ರವಿದ್ದರು. ನಮ್ಮ ವಿರುದ್ಧ ಅಭ್ಯರ್ಥಿ ಬಳಿ 22 ಮತಗಳಿದ್ದವು. ಆದರೆ ಅವರಲ್ಲಿನ 7 ಮತದಾರರು ಅಡ್ಡಮತದಾನ ಮಾಡಿದ್ದಾರೆ. 7 ಜನ ನಮಗೆ ಬೆಂಬಲ ನೀಡಿದ್ದರಿಂದ ವಿಜಯ ಸಾಧಿಸಿದ್ದೇವೆ. ನಮ್ಮ ಕಡೆ ಇದ್ದವರು ಒಬ್ಬರು ಆ ಕಡೆ ಹೋಗಿದ್ದರು. ಆದರೂ ನಾವು ಅದರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಯುದ್ಧದಲ್ಲಿ ಹೇಗಾದರೂ ಗೆಲ್ಲಬಹುದು. ನಾವು ಗೆದ್ದಿದ್ದೇವೆ. ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿಯೇ ಚುನಾವಣೆ ಮಾಡಿದ್ದೇವೆ. ಹೀಗಾಗಿ ಅವರ ಜೊತೆಯೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು‌.

ಮತ್ತೋರ್ವ ವಿಜೇತ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಚನ್ನಮ್ಮನ ಕಿತ್ತೂರು ಕ್ಷೇತ್ರದ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಆದರೆ, ಬೇರೆ ಬೇರೆ ಕಾರಣಗಳಿಂದ ಅಲ್ಲಿ ಸೋಲಾಗಿದೆ. ಆದರೂ ಮತದಾನ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ವಿಕ್ರಮ ಇನಾಮದಾರ ಅವರಿಗೂ ಅಭಿನಂದಿಸುವೆ. ಕಿತ್ತೂರು ಕ್ಷೇತ್ರದಲ್ಲಿ ಸೋಲಾಗಿದೆ. ಅದನ್ನು ಒಪ್ಪಿದ್ದೇವೆ. ಬೆನ್ನಿಗೆ ಚೂರಿ ಹಾಕಿದ್ದಾರೋ? ಆ ಕಡೆ ಬೇಕಾಗಿ ಹೋಗಿದ್ದಾರೋ ಅನ್ನುವುದೆಲ್ಲ ಮುಗಿದು ಹೋದ ವಿಷಯ. ಸಮಯ ಸಂದರ್ಭ ಬಂದಾಗ ಎಲ್ಲದಕ್ಕೂ ಉತ್ತರ ಕೊಡುವೆ ಎಂದರು.

ನನಗೆ ಯಾವುದೇ ಅಸಮಾಧಾನವಿಲ್ಲ. ಮೊದಲಿನಿಂದ ಇದೇ ಬಣದಲ್ಲಿದ್ದೇನೆ. ಅಲ್ಲಿಯೇ ಮುಂದುವರಿಯುತ್ತೇನೆ. ಸೋಲು, ಗೆಲುವು ಒಂದು ವಿಷಯವಷ್ಟೇ. ಜಿಲ್ಲಾ ರಾಜಕಾರಣವೇ ಬೇರೆ? ನನಗೆ ಅಸಮಾಧಾನ ಆಗಿರುವ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರೆ ಅವರೇ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದು ಮಹಾಂತೇಶ ದೊಡ್ಡಗೌಡರ ಹೇಳಿದರು.ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಜೊಲ್ಲೆ

ಚುನಾಯಿತರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಮ್ಮ ಬಣದಲ್ಲಿರುವ ಎಲ್ಲರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇವೆ. ಅದರಲ್ಲಿ ನಾನೂ ಒಬ್ಬ. ಆದರೆ ನಾವು, ಬಾಲಚಂದ್ರ ಜಾರಕಿಹೊಳಿ, ಸತೀಶ ಜಾರಕಿಹೊಳಿ ಸೇರಿ ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು. ಕತ್ತಿ ಮತ್ತು ಸವದಿ ಬಣಕ್ಕೆ ಲಿಂಗಾಯತ ನಿರ್ದೇಶಕರು ಹೋಗುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವರೇ ಮೊದಲು ಎಲ್ಲಿ ಹೋಗುತ್ತಾರೆ ಅಂತಾ ಅವರನ್ನೇ ಕೇಳಿ. ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತವೆ. ಆದರೆ, ಚರ್ಚೆ ಪ್ರಕಾರ ಯಾವುದೂ ಆಗುವುದಿಲ್ಲ. ತಮಗೆ ಬೇಕಾದಂತೆ ಕೆಲವರು ಚರ್ಚೆ ಮಾಡುತ್ತಿರುತ್ತಾರೆ. ಆದರೆ ನಮ್ಮ ಬಣ ಗಟ್ಟಿಯಾಗಿದೆ. ಇದೇ ಒಗ್ಗಟ್ಟಿನಲ್ಲಿ ಮುಂದುವರಿಯುತ್ತೇವೆ. ನಮ್ಮವರನ್ನು ಸೆಳೆಯಲು ಪ್ರಯತ್ನಿಸಿದರೂ ಅವರಿಗೆ ನಿರಾಶೆಯಾಗುವುದು ಖಚಿತ ಎನ್ನುತ್ತಲ್ಲೇ ವಿರೋಧಿಗಳಿಗೆ ಅಣ್ಣಾಸಾಹೇಬ ಜೊಲ್ಲೆ ತಿರುಗೇಟು ಕೊಟ್ಟರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ